ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ಇದರ ಮಧ್ಯೆ ರಾಜ್ಯದಾದ್ಯಂತ ಕುರುಡು ಕಾಂಚಾಣದ ಅಬ್ಬರ ಜೋರಾಗಿದೆ. ಈಗಾಗಲೇ ನೂರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಗ ಹಾಗೂ ಉಡುಗೊರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಇನ್ನೂ ಮುಂದುವರೆದಿದೆ.
ಮತದಾರರನ್ನು ಸೆಳೆಯುವ ಸಲುವಾಗಿ ರಾಜಕೀಯ ಪಕ್ಷಗಳ ನಾಯಕರು ಹಣ, ಹೆಂಡ ಹಾಗೂ ಉಡುಗೊರೆಗಳ ಆಮಿಷ ಒಡ್ಡುತ್ತಿದ್ದು, ಇದನ್ನು ತಡೆಗಟ್ಟಲು ಚುನಾವಣಾ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಆದರೆ ಆಮಿಷ ಈಗಲೂ ಮುಂದುವರೆದಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 6.32 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ 2.79 ಕೋಟಿ ರೂಪಾಯಿ ನಗದು, ಶಿವಾಜಿನಗರ ಕ್ಷೇತ್ರದಲ್ಲಿ 65 ಲಕ್ಷ ರೂಪಾಯಿ ನಗದು, ಗೋಕಾಕ್ ಕ್ಷೇತ್ರದಲ್ಲಿ 55 ಲಕ್ಷ ರೂಪಾಯಿ ನಗದು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ 44 ಲಕ್ಷ ರೂಪಾಯಿ ನಗದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 52 ಲಕ್ಷ ರೂಪಾಯಿ ನಗದು, ರಾಜರಾಜೇಶ್ವರಿ ಕ್ಷೇತ್ರದಲ್ಲಿ 63 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.