ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಉಭಯ ಪಕ್ಷಗಳ ಹಲವು ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ ಕುಮಾರಸ್ವಾಮಿಯವರ ಸರ್ಕಾರ ಪತನಗೊಂಡಿತ್ತು.
ಹೀಗಾಗಿ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜೀನಾಮೆ ನೀಡಿದ ಕಾಂಗ್ರೆಸ್ – ಜೆಡಿಎಸ್ ಶಾಸಕರುಗಳು ಬಿಜೆಪಿ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂತ್ರಿಗಳಾಗಿದ್ದರು. ತಮ್ಮ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯನವರೇ ಕಾರಣ ಎಂದು ಕುಮಾರಸ್ವಾಮಿಯವರು ಪದೇ ಪದೇ ಆರೋಪಿಸುತ್ತಿದ್ದಾರೆ.
ಇದರ ಮಧ್ಯೆ ಹಾಸನದಲ್ಲಿ ಮಾತನಾಡಿರುವ ಎಚ್.ಡಿ. ರೇವಣ್ಣ, ಚುನಾವಣೆಗೆ ನಾಲ್ಕು ದಿನ ಮುನ್ನ ನರೇಂದ್ರ ಮೋದಿಯವರು ಕುಮಾರಸ್ವಾಮಿಯವರನ್ನು ದೆಹಲಿಗೆ ಕರೆಸಿಕೊಂಡು ನಾವು ನಿಮ್ಮ ಜೊತೆ ಇರುತ್ತೇವೆ. 5 ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಗಳಾಗಿರಿ ಎಂದು ಹೇಳಿದ್ದರು. ಇದನ್ನು ಕುಮಾರಸ್ವಾಮಿ ಅಂದು ಒಪ್ಪಿಕೊಂಡಿದ್ದರೆ ಇಂದಿಗೂ ಅವರೇ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ನವರನ್ನು ನಂಬಬೇಡಿ ಎಂದು ನರೇಂದ್ರ ಮೋದಿಯವರು ಅಂದು ಹೇಳಿದ್ದರು. ಆದರೆ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸದೆ ಕಾಂಗ್ರೆಸ್ ಜೊತೆ ಹೋದರು ಎಂದು ರೇವಣ್ಣ ಹೇಳಿದ್ದಾರೆ.