ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ವ್ಯಾಪಕ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ.
ಈಗಾಗಲೇ ಕೋಟ್ಯಾಂತರ ರೂಪಾಯಿ ನಗದು ಹಾಗೂ ಅಷ್ಟೇ ಮೊತ್ತದ ಸಾಮಗ್ರಿಗಳು ಸಿಕ್ಕಿದ್ದು, ಇದರ ಮಧ್ಯೆ ತಮ್ಮ ಕೆಲಸ ಕಾರ್ಯಗಳಿಗಾಗಿ ಹಣ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇರುವ ಜನ ಸಾಮಾನ್ಯರು ಗೊಂದಲದಲ್ಲಿ ಸಿಲುಕಿದ್ದಾರೆ.
ಒಂದೊಮ್ಮೆ ಚೆಕ್ ಪೋಸ್ಟ್ ನಲ್ಲಿ ಹಣ ಸಿಕ್ಕಿಕೊಂಡರೆ ಅದನ್ನು ಮರಳಿ ಪಡೆಯುವುದು ಹೇಗೆ ಎಂಬ ಗೊಂದಲ ಕೂಡ ಕಾಡುತ್ತಿದೆ. ಈ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ.
ವ್ಯಕ್ತಿಯೊಬ್ಬ 50,000 ರೂಪಾಯಿ ನಗದು ತೆಗೆದುಕೊಂಡು ಹೋಗಲು ಅವಕಾಶವಿದ್ದು, ಅದಕ್ಕಿಂತ ಹೆಚ್ಚು ಹಣ ಇದ್ದ ಸಂದರ್ಭದಲ್ಲಿ ಹಣದ ಮೂಲದ ಸಮಗ್ರ ಮಾಹಿತಿಯನ್ನು ನೀಡಬೇಕಾಗುತ್ತದೆ. ಬ್ಯಾಂಕಿನಿಂದ ಹಣ ತೆಗೆದುಕೊಂಡಿದ್ದರೆ ಅದರ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೆ ಲಕ್ಷಾಂತರ ರೂಪಾಯಿ ಹಣ ಇದ್ದ ಸಂದರ್ಭದಲ್ಲಿ ಯಾವ ಉದ್ದೇಶಕ್ಕಾಗಿ ಇದನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ವಿವರ ನೀಡಬೇಕಾಗುತ್ತದೆ. ಒಂದೊಮ್ಮೆ ಈ ಮಾಹಿತಿ ಸರಿ ಇದ್ದರೆ ಯಾವುದೇ ಸಮಸ್ಯೆಯಾಗುವುದಿಲ್ಲ.
ಆದರೆ ಯಾವುದೇ ಖಾತೆಯಲ್ಲಿ ಈವರೆಗೆ ದೊಡ್ಡ ಮಟ್ಟದ ವಹಿವಾಟು ನಡೆಯದೆ ಏಕಾಏಕಿ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆದಿದ್ದರೆ ಅವುಗಳ ಮೇಲೂ ನಿಗಾ ಇಡಲಾಗುತ್ತದೆ. ಒಂದೊಮ್ಮೆ ಚೆಕ್ ಪೋಸ್ಟ್ ಅಲ್ಲಿ ಸೂಕ್ತ ದಾಖಲೆಗಳಿಲ್ಲದ 10 ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಸಿಕ್ಕರೆ ಅಂತಹ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ.
ಹಾಗೆಯೇ ವ್ಯಕ್ತಿಯೊಬ್ಬ ಎರಡು ಲೀಟರ್ ವರೆಗೆ ಮದ್ಯ ತೆಗೆದುಕೊಂಡು ಹೋಗಲು ಅವಕಾಶವಿದ್ದು, ಅದಕ್ಕೂ ಹೆಚ್ಚಿನ ಮದ್ಯ ಸಿಕ್ಕ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.