ಮೇ 10 ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದೆ. ಆದಾಯ ಕೊರತೆ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡಲಾಗಿದ್ದು, ಇದು ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ.
ಈ ಕುರಿತಂತೆ ಕೆಇಆರ್‌ಸಿ ಪ್ರಕಟಣೆ ಹೊರಡಿಸಿದ್ದು, ಸ್ಥಿರ ವೆಚ್ಚದ ಮೂಲಕ 57 ಪೈಸೆ ಹಾಗೂ ಇಂಧನ ಶುಲ್ಕವಾಗಿ 13 ಪೈಸೆಯನ್ನು ವಸೂಲಿ ಮಾಡಲು ಮುಂದಾಗಿದೆ. ಈ ಶುಲ್ಕ ಏರಿಕೆ ಎಲ್ ಟಿ ಮತ್ತು ಎಚ್ ಟಿ ಬಳಕೆದಾರರಿಬ್ಬರಿಗೂ ಅನ್ವಯವಾಗಲಿದೆ. ಈ ಹಿಂದೆಯೇ ವಿದ್ಯುತ್ ಶುಲ್ಕ ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆದಿತ್ತಾದರೂ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು ಎಂದು ಹೇಳಲಾಗಿದೆ.
ಆದಾಯ ಕೊರತೆ ಹಿನ್ನೆಲೆಯಲ್ಲಿ ವಿವಿಧ ಎಸ್ಕಾಂ ಗಳು 1.46 ರೂಪಾಯಿ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಮನವಿ ಸಲ್ಲಿಸಿದ್ದು, ಅಂತಿಮವಾಗಿ 70 ಪೈಸೆ ಏರಿಕೆ ಮಾಡಲಾಗಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿಯೂ ವಿದ್ಯುತ್ ದರದಲ್ಲಿ ಶೇ.4.12 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದೀಗ ಫಲಿತಾಂಶ ಪ್ರಕಟವಾಗುವ ಮುನ್ನ ಸಾರ್ವಜನಿಕರ ಮೇಲೆ ಮತ್ತೊಂದು ಹೊರೆ ಹೆಗಲೇರಿದೆ.