ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯುತ್ತಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಮಾರ್ಚ್ 29ರಂದು ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದ್ದು, ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿತ್ತು.
ಆದರೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ವಿವಿಧೆಡೆ ದಾಳಿ ನಡೆಸಿದ್ದ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ದಿನಸಿ ಸಾಮಾಗ್ರಿಗಳು, ಕುಕ್ಕರ್, ಮಿಕ್ಸರ್ ಮೊದಲಾದವನ್ನು ವಶಪಡಿಸಿಕೊಂಡು ಇದೀಗ ಪ್ರಕರಣ ಒಂದರಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನ ಶಿವಾಜಿನಗರ ನಿವಾಸಿ ಇಷ್ತಿಯಾಕ್ ಅಹ್ಮದ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಆದೇಶ ಹೊರಡಿಸಿರುವ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರಿದ್ದ ಪೀಠ ಚುನಾವಣಾ ಘೋಷಣೆಗೂ ಮುನ್ನವೇ ಯಾವುದೇ ವಸ್ತುಗಳನ್ನು ಜಪ್ತಿ ಮಾಡುವ ಅವಕಾಶವಿಲ್ಲ ಎಂದು ತಿಳಿಸಿದ್ದು, ವಸ್ತುಗಳನ್ನು ವಾಪಾಸ್ ನೀಡುವಂತೆ ನಿರ್ದೇಶನ ನೀಡಿದೆ.
ಇಷ್ತಿಯಾಕ್ ಅಹ್ಮದ್ ತಲಾ 25 ಕೆಜಿಯ 530 ಅಕ್ಕಿ ಮೂಟೆಗಳನ್ನು ದಾಸ್ತಾನು ಮಾಡಿದ್ದು, ಇದನ್ನು ಮಾರ್ಚ್ 19 ರಂದು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಇಷ್ತಿಯಾಕ್ ಅಹ್ಮದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅಕ್ಕಿ ಮೂಟೆಗಳನ್ನು ವಾಪಸ್ ನೀಡುವಂತೆ ಸೂಚಿಸಲಾಗಿದ್ದು, ಆದರೆ ಚುನಾವಣೆ ಮುಗಿಯುವವರೆಗೂ ಅದನ್ನು ವಿತರಿಸುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.