ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಮೂರ್ನಾಲ್ಕು ತಿಂಗಳುಗಳಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾವು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಕೋಲಾರ ಕ್ಷೇತ್ರ ಈಗಿನಿಂದಲೇ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಮಣಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈಗಿನಿಂದಲೇ ಕಾರ್ಯತಂತ್ರ ರೂಪಿಸತೊಡಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರಂತೆಯೇ ಮತ್ತೊಬ್ಬ ಪ್ರಭಾವಿ ನಾಯಕ ಸಿದ್ದರಾಮಯ್ಯನವರು. ಅಲ್ಲದೆ ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಿನಂತಾಗಿರುವ ಸಿದ್ದರಾಮಯ್ಯನವರನ್ನು ಈ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂಬ ಕಾರಣಕ್ಕೆ ಬಿಜೆಪಿ ಹಲವು ತಂತ್ರಗಳನ್ನು ಹೆಣೆಯುತ್ತಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈಗಾಗಲೇ ಕೋಲಾರಕ್ಕೆ ಭೇಟಿ ನೀಡಿ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳನ್ನು ಸಹ ತಿಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಜೆಡಿಎಸ್ ನಾಯಕರು ಸಹ ಸಿದ್ದರಾಮಯ್ಯನವರ ಸೋಲಿಗೆ ಪಣತೊಟ್ಟಿದ್ದು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಹ ಕೋಲಾರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಜೆಪಿಯ ಸಂಭವನೀಯ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರನ್ನು ಹೊಗಳಿರುವುದು ಅಚ್ಚರಿಗೆ ಕಾರಣವಾಗಿದೆ. ಸಿದ್ದರಾಮಯ್ಯನವರನ್ನು ಸೋಲಿಸಲು ಬಿಜೆಪಿ – ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿವೆಯಾ ಎಂಬ ಪ್ರಶ್ನೆಯೂ ಮೂಡಿದೆ. ಆದರೆ ಉಭಯ ಪಕ್ಷಗಳ ನಾಯಕರು ಇದನ್ನು ತಳ್ಳಿ ಹಾಕಿದ್ದಾರೆ.
ಇದರ ಮಧ್ಯೆ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರ ಬೀಳುತ್ತಿದ್ದು, ಚುನಾವಣೆ ಘೋಷಣೆಗೆ ನಾಲ್ಕು ತಿಂಗಳ ಮುನ್ನವೇ ಕ್ಷೇತ್ರವನ್ನು ಘೋಷಿಸುವ ಮೂಲಕ ಸಿದ್ದರಾಮಯ್ಯ ರಾಜಕೀಯ ತಂತ್ರಗಾರಿಕೆ ಮೆರೆದಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಕ್ಷೇತ್ರ ಕೋಲಾರ ಎಂದು ಘೋಷಿಸಿರುವ ಕಾರಣ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಅತ್ತ ಕಡೆಯೇ ತಮ್ಮ ಗಮನ ಕೇಂದ್ರೀಕರಿಸುತ್ತಾರೆ ಎಂಬುದು ಇದರ ಹಿಂದಿನ ಲೆಕ್ಕಾಚಾರವೆನ್ನಲಾಗಿದೆ. ಚುನಾವಣೆ ಇನ್ನೇನು ಕೆಲ ದಿನಗಳು ಇರುವಂತೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.