ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಹಾಗೂ ಕಾನೂನಿನ ಅನ್ವಯ ಸಾಮಾನ್ಯ ಹಕ್ಕೂ ಅಲ್ಲ ಎಂದು ಹೇಳಿದೆ.
ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬರಿಗೆ ಅವರ ಹೆಸರು ಸೂಚಿಸಲು ಹಾಗೂ ಅನುಮೋದನೆಗೆ ಯಾರೂ ಇಲ್ಲದ ಕಾರಣ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ ಅವರು ಅರ್ಜಿ ತಿರಸ್ಕೃತವಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಜೊತೆಗೆ ಜನಪ್ರಾತಿನಿಧ್ಯ ಕಾಯ್ದೆ 1950 ಹಾಗೂ ಚುನಾವಣಾ ನಿಯಮಗಳು 1961ರಲ್ಲಿ ರಾಜ್ಯಸಭೆಗೆ ಸ್ಪರ್ಧಿಸಬೇಕಾದ ಸ್ಪರ್ಧಿ ಹೆಸರನ್ನು ಸೂಚಿಸಬೇಕು ಮತ್ತು ಅನುಮೋದಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದೆ.
ಅಲ್ಲದೆ ಕಲಾಪದ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, 4 ವಾರಗಳ ಒಳಗಾಗಿ ಇದನ್ನು ಸುಪ್ರೀಂ ಕೋರ್ಟ್ ಕಾನೂನು ನೆರವು ಸಮಿತಿಗೆ ನೀಡಬೇಕು ಎಂದು ಆದೇಶಿಸಿದೆ.