ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಚುನಾವಣೆಯಲ್ಲಿ 25 ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಪರ್ಧಿಸುತ್ತಿದ್ದು ಈ ಪೈಕಿ ಅವರು ಸ್ವಾಮೀಜಿಗಳು ಎಂದು ಹೇಳಲಾಗಿದೆ.
ಈ ವಿಚಾರ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದ್ದು, ಈವರೆಗೆ ಪ್ರಮೋದ್ ಮುತಾಲಿಕ್ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಳ್ಳುತ್ತಿದ್ದ ಕೆಲವೊಂದು ಕಾರ್ಯಕ್ರಮಗಳಿಂದ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಆದರೆ ಇದೀಗ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರೇ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವುದು ಬಿಜೆಪಿಗೆ ತಳಮಳವನ್ನುಂಟು ಮಾಡಿದೆ ಎನ್ನಲಾಗಿದೆ.
ಬಿಜೆಪಿಯ ಮತಗಳನ್ನೇ ಇವರುಗಳು ಪಡೆಯುವ ಕಾರಣ ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಅನುಕೂಲವಾಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದ್ದು, ಹೀಗಾಗಿಯೇ ಕಾರ್ಯಕರ್ತರ ಮೂಲಕ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ನ ಬಿ ಟೀಮ್ ಎಂಬಂತೆ ಪ್ರಚಾರವನ್ನು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಪ್ರಮೋದ್ ಮುತಾಲಿಕ್ ಬೆಂಬಲಿಗರು ಮಾತ್ರ, ಅವರು ಎಂದಿಗೂ ಕಾಂಗ್ರೆಸ್ ಬಿ ಟೀಮ್ ಆಗಲು ಸಾಧ್ಯವೇ ಇಲ್ಲ. ಈ ಮೊದಲು ಟಿಕೆಟ್ ನೀಡದೆ ಪ್ರಮೋದ್ ಮುತಾಲಿಕ್ ಅವರನ್ನು ವಂಚಿಸಿದ್ದ ಬಿಜೆಪಿ ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಕಾರಣಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯ ಚಿತ್ರಣ ಯಾವ ರೀತಿ ಬದಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.