ಬಿಜೆಪಿಯಲ್ಲಿ ತಮಗೆ ಸೂಕ್ತ ಸ್ಥಾನಮಾನ ನೀಡಲಿಲ್ಲವೆಂಬ ಕಾರಣಕ್ಕೆ ಸೆಡ್ಡು ಹೊಡೆದು ‘ಕಲ್ಯಾಣ ರಾಜ್ಯ ಪ್ರಗತಿಪಕ್ಷ’ ಸ್ಥಾಪಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಸಹ ಘೋಷಿಸಲಾಗುತ್ತದೆ.
ಬಳ್ಳಾರಿ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಕ್ರಿಯ ಪ್ರಚಾರ ಕಾರ್ಯನಿರ್ವಹಿಸುವ ನೂರು ಮಂದಿ ನಿಷ್ಠಾವಂತ ಕಾರ್ಯಕರ್ತರಿಗೆ ಬೈಕ್ ನೀಡಲು ಜನಾರ್ದನ ರೆಡ್ಡಿ ಅವರು ನಿರ್ಧರಿಸಿದ್ದು, 100 ಟಿವಿಎಸ್ ಸ್ಪೋರ್ಟ್ಸ್ ಬೈಕ್ ಗಳಿಗೆ ಆರ್ಡರ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ 10 ಬೈಕುಗಳು ಈಗಾಗಲೇ ಸಂಚಾರ ಆರಂಭಿಸಿವೆ ಎಂದು ಮೂಲಗಳು ಹೇಳಿವೆ.
ಇದರ ಜೊತೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರಿಗೆ ದುಬಾರಿ ಮೊಬೈಲ್ ಗಳನ್ನು ವಿತರಿಸಲಾಗುತ್ತದೆ ಎಂದು ಹೇಳಲಾಗಿದ್ದು, ಇದಕ್ಕೆ ಒಂದು ವರ್ಷದ ಕರೆನ್ಸಿಯನ್ನು ಹಾಕಿಸಲಾಗುತ್ತದೆ. ಇನ್ನು ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಮಹಿಳೆಯರಿಗೆ ಉಡುಗೊರೆಯಾಗಿ ತಲಾ ಎರಡು ಸಾವಿರ ರೂಪಾಯಿ ಬೆಲೆ ಬಾಳುವ 1 ಲಕ್ಷ ಕಾಂಚೀವರಂ ಸೀರೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.