ಗುಜರಾತ್ ನಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋ ಮೂಲಕ ಬಿಜೆಪಿ ಜಯಭೇರಿ ಬಾರಿಸಿದೆ. ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಏಳನೇ ಬಾರಿ ಗುಜರಾತ್ ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇನ್ನು ಎಎಪಿಯೂ ಈ ರಾಜ್ಯದಲ್ಲಿ ತನ್ನ ಖಾತೆ ತೆರೆದಿದೆ. ಚುನಾವಣೆಗೂ ಮುನ್ನವೆ ಮೂರು ಜನ ಗೆಲ್ತಾರೆ ಅಂತ ಕೇಜ್ರಿವಾಲ್ ಹೇಳಿದ್ದರು.
ಹೌದು, ಚುನಾವಣಾ ಪ್ರಚಾರದ ವೇಳೆ, ಇಸುದನ್ ಗಧ್ವಿ, ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಅಲ್ಪೇಶ್ ಕಥಿರಿಯಾ ಹೆಸರು ಹೇಳಿ, ಇವರು ಖಂಡಿತವಾಗಿ ಗೆಲುವು ಸಾಧಿಸುತ್ತಾರೆ ಎಂದಿದ್ದರು. ಅಲ್ಲದೇ ಇದನ್ನು ಕಾಗದದ ಮೇಲೆ ಬೇಕಾದರೂ ಬರೆದುಕೊಡುವೆ ಎಂದಿದ್ದರು.
ಆದರೆ, ಇವರೆಲ್ಲರೂ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಖಂಭಾಲಿಯಾ ಕ್ಷೇತ್ರದಿಂದ ಇಸುದನ್ ಗಧ್ವಿಗೆ ಸ್ಪರ್ಧೆ ಮಾಡಿದ್ದರು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ.
ಇನ್ನು, ಕಟರ್ಗಾಮ್ ಕ್ಷೇತ್ರದಿಂದ ಗೋಪಾಲ್ ಇಟಾಲಿಯಾ ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಲ್ಲೂ ಬಿಜೆಪಿ ಜಯ ಗಳಿಸಿದೆ. ಇನ್ನು, ವರಚ ರೋಡ್ ಕ್ಷೇತ್ರದಿಂದ ಅಲ್ಪೇಶ್ ಕಥಿರಿಯಾ ಸ್ಪರ್ಧೆ ಮಾಡಿದ್ದರು. ಇಲ್ಲಿಯೂ ಬಿಜೆಪಿ ಗೆದ್ದಿದೆ.
ಈ ಮೂಲಕ ಕೇಜ್ರಿವಾಲ್ ಅವರ ಭವಿಷ್ಯ ಹುಸಿಯಾಗಿದೆ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಎಎಪಿಗೆ ಇದೀಗ ಬೇಸರ ಅಂತೂ ಆಗಿದೆ. ಯಾಕಂದರೆ ಎಎಪಿ ದೊಡ್ಡ ಮಟ್ಟದ ಸ್ಥಾನಗಳ ನಿರೀಕ್ಷೆ ಮಾಡಿತ್ತು.