ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸನಿಹವಾಗುತ್ತಲೇ ಆಡಳಿತಾರೂಢ ಬಿಜೆಪಿ ಹಾಗೂ ಬಿಎಸ್‌ಪಿ ಶಾಸಕರು ಸಮಾಜವಾದಿ ಪಾರ್ಟಿ ಸೇರಿಕೊಂಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಈ ನಾಯಕರು ಪಕ್ಷಾಂತರದ ಕೆಲಸ ಪೂರ್ಣಗೊಳಿಸಿದ್ದಾರೆ.
ಗೊರಾಖ್ಪುರದ ಚಿಲ್ಲೀಪಾರ್ ವಿಧಾನ ಸಭಾ ಕ್ಷೇತ್ರದಿಂದ ಬಿಎಸ್‌ಪಿ ಟಿಕೆಟ್ ಮೇಲೆ ಗೆದ್ದು ಬಂದಿದ್ದ ವಿನಯ್ ಶಂಕರ್ ಇತ್ತೀಚೆಗಷ್ಟೇ ತಮ್ಮ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದರು. ಇವರೊಂದಿಗೆ, ಸಂತ ಕಬೀರ್‌ನಗರದ ಬಿಜೆಪಿ ಶಾಸಕ ದಿಗ್ವಿಜಯ್ ನಾರಾಯಣ್ ಅಲಿಯಾಸ್ ಜೈ ಚೌಬೇ ಸಹ ಎಸ್‌ಪಿ ಸೇರಿಕೊಂಡಿದ್ದಾರೆ.
ಪಕ್ಷದ ಹಿರಿಯ ನಾಯಕರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಎಂಬ ಕಾರಣ ಕೊಟ್ಟು ತಿವಾರಿಯವರನ್ನು ಬಿಎಸ್‌ಪಿ ಕಳೆದ ಸೋಮವಾರ ಉಚ್ಛಾಟಿಸಿತ್ತು.
ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ 2010ರಲ್ಲಿ ಬಿಎಸ್‌ಪಿಯಿಂದ ನೇಮಕಗೊಂಡಿದ್ದ ಗಣೇಶ್ ಶಂಕರ್ ಸಹ ಇದೇ ವೇಳೆ ಸಮಾಜವಾದಿ ಪಕ್ಷ ಸೇರಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್, “ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಭಾರೀ ಪಕ್ಷಪಾತದಿಂದ ಕೆಲಸ ಮಾಡಲಾಗಿದೆ. ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯನ್ನೇ ಪಾಲಿಸುತ್ತಿರುವ ಬಿಜೆಪಿ ಜನರಲ್ಲಿ ಭಯ ಮೂಡಿಸಿಕೊಂಡು ಆಳುತ್ತಾ ಬಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನ ಪಾಠ ಕಲಿಸಲಿದ್ದಾರೆ. ಈ ಸರ್ಕಾರವು ಕೋವಿಡ್-19 ಸಾಂಕ್ರಮಿಕವನ್ನು ಸರಿಯಾಗಿ ನಿರ್ವಹಿಸಿಲ್ಲ. ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಾಗಿದ್ದನ್ನು, ನದಿಗಳಲ್ಲಿ ಶವಗಳು ತೇಲುತ್ತಿದ್ದದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ,” ಎಂದು ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ಆಪಾದನೆ ಮಾಡಿದ್ದಾರೆ.