ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ಶುಕ್ರವಾರದಂದು ನಿವೃತ್ತಿ ಘೋಷಿಸಿದ್ದು, ತಾವು ಈವರೆಗೆ ಪ್ರತಿನಿಧಿಸುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಕಿರಿಯ ಪುತ್ರ ವಿಜಯೇಂದ್ರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಕ್ಷೇತ್ರದ ಜನತೆ ತಮಗೆ ಈ ಹಿಂದೆ ನೀಡಿದ ಬೆಂಬಲದಂತೆ ವಿಜಯೇಂದ್ರ ಅವರಿಗೂ ಬೆಂಬಲ ಮುಂದುವರೆಸಲು ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರ ಈ ದಿಢೀರ್ ನಿರ್ಧಾರ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಅವರ ಆಪ್ತ ಮೂಲಗಳ ಪ್ರಕಾರ ಅವರು ಈ ಕುರಿತು ಮೊದಲೇ ನಿರ್ಧಾರ ಮಾಡಿಕೊಂಡಿದ್ದರೆನ್ನಲಾಗಿದ್ದು, ಇತ್ತೀಚೆಗೆ ಅವರು ಕುಟುಂಬ ಸದಸ್ಯರೊಂದಿಗೆ ವಿದೇಶ ಪ್ರವಾಸ ಕೈಗೊಂಡಿದ್ದ ವೇಳೆಯೇ ಇದಕ್ಕೆ ಅಂತಿಮ ರೂಪುರೇಷೆ ನೀಡಲಾಯಿತು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಘೋಷಣೆ ಮಾಡಿದ್ದಾರೆ.
ಈಗಾಗಲೇ ಯಡಿಯೂರಪ್ಪನವರ ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದು, ಕಿರಿಯ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೂ ರಾಜಕೀಯ ಸ್ಥಾನಮಾನ ಕಲ್ಪಿಸುವ ಇರಾದೆಯನ್ನು ಯಡಿಯೂರಪ್ಪನವರು ಹೊಂದಿದ್ದರು. ಹೀಗಾಗಿ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯನ್ನು ಯಡಿಯೂರಪ್ಪನವರು ಹೊಂದಿದ್ದು, ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು.
ಇದರಿಂದ ಬೇಸರಗೊಂಡಿದ್ದ ಅವರು ಇತ್ತೀಚೆಗೆ ಬಿಜೆಪಿಯ ಚಟುವಟಿಕೆಗಳಲ್ಲಿ ಅಷ್ಟು ಸಕ್ರಿಯರಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಅವರ ಹೆಸರನ್ನು ಘೋಷಿಸಿರುವ ಕಾರಣ ಬಿಜೆಪಿ, ಅವರಿಗೆ ಅನಿವಾರ್ಯವಾಗಿ ಟಿಕೆಟ್ ಕೊಡಬೇಕಾದ ಸಂದರ್ಭ ಒದಗಿ ಬರುತ್ತದೆ. ಇಲ್ಲವಾದರೆ ಕಡೆ ಪಕ್ಷ ಬೇರೊಂದು ಕ್ಷೇತ್ರದಲ್ಲಾದರೂ ವಿಜಯೇಂದ್ರ ಅವರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ.
ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಯಡಿಯೂರಪ್ಪನವರನ್ನು ನಿರ್ಲಕ್ಷಿಸುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸೀಟ್ ಗಳಿಸಬೇಕೆಂದರೆ ಯಡಿಯೂರಪ್ಪನವರ ಬೆಂಬಲ ಅತ್ಯಗತ್ಯ. ಹೀಗಾಗಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.