ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ನಡೆಯುತ್ತಿದ್ದು, ಬಹಿರಂಗ ಪ್ರಚಾರ ಸೋಮವಾರ ಸಂಜೆಯಿಂದಲೇ ಅಂತ್ಯಗೊಂಡಿದೆ. ಅದಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ಮೂಲಕವೂ ಮತದಾರರನ್ನು ಸೆಳೆಯಲು ಮುಂದಾಗಿದ್ದರು.
ಇದರ ಮಧ್ಯೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಸಂವಿಧಾನ ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡರೆ ಅಂತಹ ಸಂದರ್ಭದಲ್ಲಿ ಬಜರಂಗದಳ, ಪಿಎಫ್ಐ ಮೊದಲಾದ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಬಳಿಕ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಇದನ್ನು ಪ್ರಸ್ತಾಪಿಸಿದ್ದ ನರೇಂದ್ರ ಮೋದಿಯವರು, ಬಜರಂಗಬಲಿ ಕಿ ಜೈ ಎಂಬ ಘೋಷಣೆ ಕೂಗಿದ್ದರು. ಇದಕ್ಕೆ ಈಗ ರಾಷ್ಟ್ರವಾದಿ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೋಮವಾರದಂದು ಮುಂಬೈನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ನಾವು ಜಾತ್ಯಾತೀತ ರಾಷ್ಟ್ರವನ್ನು ಒಪ್ಪಿಕೊಂಡಿದ್ದೇವೆ. ಧರ್ಮ ಮತ್ತು ಧಾರ್ಮಿಕತೆಯನ್ನು ಆಧರಿಸಿದ ಚುನಾವಣೆ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಳ್ಳೆಯದಲ್ಲ ಎಂದರಲ್ಲದೆ ಹೀಗಾಗಿ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿಯವರು ಧಾರ್ಮಿಕ ಘೋಷಣೆ ಕೂಗಿದ್ದು ಸರಿಯಲ್ಲ ಎಂದಿದ್ದಾರೆ.