ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ಪುನರಾಯ್ಕೆ ಬಯಸಿ ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಪರವಾಗಿ ಪ್ರಚಾರ ಮಾಡಲು ಸುಳ್ಳು ಕಾರಣ ಕೊಟ್ಟು ವೈದ್ಯಕೀಯ ರಜೆ ಪಡೆದಿದ್ದ ಆಪ್ತ ಸಹಾಯಕನನ್ನು ಈಗ ಸಸ್ಪೆಂಡ್ ಮಾಡಲಾಗಿದೆ.
ಸೊರಬ ತಾಲೂಕು ಇಂಡುವಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಶಾಸಕ ಕುಮಾರ್ ಬಂಗಾರಪ್ಪನವರ ಆಪ್ತ ಸಹಾಯಕರಾಗಿರುವ ಉಮೇಶ್ ಡಿ. ಗೌಡರ್ ಅಮಾನತುಗೊಂಡವರಾಗಿದ್ದು, ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಶುಕ್ರವಾರದಂದು ಆದೇಶ ಹೊರಡಿಸಿದ್ದಾರೆ.
ಉಮೇಶ್ ಸುಳ್ಳು ಕಾರಣ ಕೊಟ್ಟು ಏಪ್ರಿಲ್ 20ರಿಂದ ವೈದ್ಯಕೀಯ ಕಾರಣಗಳಿಗಾಗಿ ರಜೆ ಮಂಜೂರು ಮಾಡಿಸಿಕೊಂಡಿದ್ದು, ಈ ಕುರಿತಂತೆ ದೂರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸೂಕ್ತ ಸಮಜಾಯಿಷಿ ನೀಡುವಂತೆ ನೋಟಿಸ್ ನೀಡಿದ್ದರೂ ಸಹ ಅವರು ಉತ್ತರ ನೀಡಿರಲಿಲ್ಲ.
ಅಂತಿಮವಾಗಿ ವೈದ್ಯಕೀಯ ಪ್ರಮಾಣ ಪತ್ರದ ನೈಜತೆ ಪರಿಶೀಲಿಸುವಂತೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಲಾಗಿದ್ದು, ತಪಾಸಣೆ ನಡೆಸಿದ ತಜ್ಞ ವೈದ್ಯರು ಯಾವುದೇ ಕಾಯಿಲೆ ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಉಮೇಶ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಲಾಗಿದ್ದರೂ ಅವರು ಉತ್ತರಿಸಿರಲಿಲ್ಲ. ಅಂತಿಮವಾಗಿ ಮೇ 5ರಂದು ಕರ್ತವ್ಯಕ್ಕೆ ಹಾಜರಾಗಿ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದರು. ಇದಾದ ಬಳಿಕ ಶಾಸಕರ ಆಪ್ತ ಸಹಾಯಕ ಕರ್ತವ್ಯದಿಂದ ಉಮೇಶ್ ಅವರನ್ನು ಬಿಡುಗಡೆಗೊಳಿಸಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದರೂ ಹಾಜರಾಗಿರಲಿಲ್ಲ. ಇದೀಗ ಉಮೇಶ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.