ತಮಿಳುನಾಡು ನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಲವಾರು ಅಭ್ಯರ್ಥಿಗಳು ಜನರ ಬಳಿ ಮತ ಕೇಳಲು ವಿವಿಧ ವಿಧಾನಗಳನ್ನು ಬಳಕೆ ಮಾಡುತ್ತಿದ್ದಾರೆ. ಕೊಯಮತ್ತೂರಿನಲ್ಲಿ ಅಭ್ಯರ್ಥಿಯೊಬ್ಬರು ರಾಜನ ವೇಷ ಧರಿಸಿ ಕೈಯಲ್ಲಿ ಪೊರಕೆಯನ್ನು ಹಿಡಿದು ಮತಯಾಚನೆ ಮಾಡಿದ್ದಾರೆ.
ನೂರ್ ಮಹಮ್ಮದ್ ಚುನಾವಣಾ ರಾಜ ಎಂದೇ ಪ್ರಸಿದ್ಧರಾಗಿದ್ದಾರೆ. ಇಲ್ಲಿಯವರೆಗೆ 29 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ನೂರ್ ಮಹಮ್ಮದ್ ಮತಯಾಚನೆ ಮಾಡಲು ಪ್ರತಿ ಬಾರಿಯೂ ಏನಾದರೊಂದು ವಿಭಿನ್ನ ವಿಧಾನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಟೈಯರ್ ಗಾಡಿ, ಎತ್ತಿನಗಾಡಿ, ಕುದುರೆ, ಸೈಕಲ್ ಇತ್ಯಾದಿಗಳಲ್ಲಿ ಸಂಚಾರ ಮಾಡುತ್ತಾ ನೂರ್ ಮಹಮ್ಮದ್ ಮತಯಾಚನೆ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯು ಇದೇ ಶನಿವಾರದಂದು ನಡೆಯಲಿದ್ದು ಮಂಗಳವಾರ ಅಂದರೆ ಫೆಬ್ರವರಿ 22ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಈ ಬಾರಿಯ ಚುನಾವಣಾ ಪ್ರಚಾರಕ್ಕೆ ನೂರ್ ಮೊಹಮ್ಮದ್ ರಾಜನಂತೆ ವೇಷ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ಕೊಯಂಬತ್ತೂರಿನಲ್ಲಿ ಮತಯಾಚನೆ ಮಾಡಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿರುವ ನೂರ್ ಮಹಮ್ಮದ್ ನಾಮಪತ್ರ ಸಲ್ಲಿಕೆಗೆ ಈ ವೇಷದಲ್ಲಿ ಬಂದದ್ದನ್ನು ಕಂಡು ಅನೇಕರು ಆಶ್ಚರ್ಯಚಕಿತರಾದರು.
ನಾಮಪತ್ರ ಸಲ್ಲಿಕೆಗೆ ಕುದುರೆ ಏರಿ ಬಂದ ನೂರ್ ಮಹಮ್ಮದ್ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ರಾಜನಂತೆ ಧಿರಿಸನ್ನು ಧರಿಸಿದ್ದ ನೂರ್ ಮಹಮ್ಮದ್ ರಾಜಭಟರ ವೇಷದಲ್ಲಿದ್ದವರ ಜೊತೆ ಸೇರಿ ನಗರದ ಕಸವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ .