ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆ ಕಾರ್ಯಕ್ಕಾಗಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಪಡೆದುಕೊಳ್ಳಲಾಗಿದ್ದು, ಹೀಗಾಗಿ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ತೆರಳಲು ಮುಂದಾಗಿದ್ದ ಪ್ರಯಾಣಿಕರು ಮೆಜೆಸ್ಟಿಕ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.
ಆಗೊಮ್ಮೆ ಈಗೊಮ್ಮೆ ತಾವು ಹೋಗುವ ಮಾರ್ಗಕ್ಕೆ ಬರುವ ಬಸ್ಸಿಗೆ ಮುಗಿಬಿದ್ದು ಪ್ರಯಾಣಿಕರು ಹತ್ತುತ್ತಿದ್ದು, ಈ ಪೈಪೋಟಿಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಮತದಾನ ಮಾಡಲು ನಾಳೆ ಸಾರ್ವತ್ರಿಕ ರಜಾ ದಿನ ಘೋಷಿಸಿರುವುದರಿಂದ ಮತದಾರರು ಇಂದೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಖಾಸಗಿ ಬಸ್ಸುಗಳು ಸಂಪೂರ್ಣವಾಗಿ ಬುಕ್ ಆಗಿದ್ದು, ಇದರ ದುಬಾರಿ ವೆಚ್ಚ ಭರಿಸಲಾರದೆ ಕೆಎಸ್ಆರ್ಟಿಸಿ ಬಸ್ಸಿನ ಮೊರೆ ಹೋಗಿದ್ದ ಜನಸಾಮಾನ್ಯರು ಈಗ ಊರಿಗೆ ತೆರಳಲು ಸಂಕಷ್ಟ ಎದುರಿಸುತ್ತಿದ್ದಾರೆ. ಮತದಾರರ ಅನುಕೂಲಕ್ಕಾಗಿ ಮೂರು ವಿಶೇಷ ರೈಲುಗಳನ್ನು ಬಿಟ್ಟಿದ್ದರೂ ಸಹ ಅವುಗಳ ಸಂಚಾರ ಇಂದು ಸಂಜೆಯಿಂದ ಶುರುವಾಗಲಿದೆ. ಇನ್ನು ಮಿಕ್ಕ ರೈಲುಗಳಲ್ಲೂ ಸಹ ಪ್ರಯಾಣಿಕರು ಮುಗಿಬಿದ್ದು ಹತ್ತುತ್ತಿದ್ದಾರೆ.