ರಾಮನಗರ: ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಸಂಸದ ಡಿ.ಕೆ. ಸುರೇಶ್ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತವಾಗಿದೆ. ನಾನೂ ನಾಮಪತ್ರ ಸಲ್ಲಿಸುತ್ತೇನೆ ಆದರೆ ಯಾವ ಕ್ಷೇತ್ರ ಎಂಬುದನ್ನು ಕಾದು ನೋಡಿ ಎಂದು ಹೇಳುವ ಮೂಲಕ ಕುತೂಹಲ ಇಮ್ಮಡಿಗೊಳಿಸಿದ್ದಾರೆ.
ಡಿ.ಕೆ. ಸುರೇಶ್ ಪದ್ಮನಾಭನಗರದಿಂದ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ವಿರುದ್ಧ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಕಾಂಗ್ರೆಸ್ ನಲ್ಲಿ ಕೇಳಿ ಬಂದಿತ್ತು. ಆದರೆ ಅದಾಗಲೇ ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದ್ದರಿಂದ ನಿನ್ನೆ ರಘುನಾಥ ನಾಯ್ಡು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಕೊನೇ ಕ್ಷಣದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಆದರೆ ಯಾವ ಕ್ಷೇತ್ರ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಚೆನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ನಾನು ನಾಮಪತ್ರ ಸಲ್ಲಿಸಲು ಬೆಂಗಳೂರಿಗೆ ಹೋಗುತ್ತಿದ್ದೇನೆ. ಯಾವ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂಬುದನ್ನು ಕಾದು ನೋಡಿ. ಮಧ್ಯಾಹ್ನ 2:30ರವರೆಗೆ ಕಾಯಿರಿ ಬಳಿಕ ಗೊತ್ತಾಗಲಿದೆ ಎಂದು ಹೇಳಿದ್ದಾರೆ.