ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆಯಿಂದ ಅಂತ್ಯಗೊಳ್ಳುತ್ತಿದ್ದು, ಹಲವು ಅಭ್ಯರ್ಥಿಗಳು ಕುರುಡು ಕಾಂಚಾಣದ ಮೂಲಕ ಮತ ಬೇಟೆಗೆ ಮುಂದಾಗಲಿದ್ದಾರೆ. ಮನೆ ಮನೆ ಪ್ರಚಾರದ ಜೊತೆಗೆ ಹಣ ಹಂಚಿಕೆಗೆ ಸಿದ್ಧತೆಗಳು ಸಹ ನಡೆದಿದ್ದು, ಇದಕ್ಕಾಗಿ ಈಗಾಗಲೇ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಸಹ ಚಾಪೆ ಕೆಳಗೆ ನುಸುಳುವ ಅಭ್ಯರ್ಥಿಗಳು ಮತದಾರರಿಗೆ ಗುಂಡು, ತುಂಡಿನ ವ್ಯವಸ್ಥೆ ಮಾಡುತ್ತಿದ್ದು, ಪ್ರಚಾರ ಕಾರ್ಯ ಮಾಡಿ ಸೋತು ಸುಸ್ತಾಗಿ ಬರುವ ಕಾರ್ಯಕರ್ತರಿಗೆ ಟೋಕನ್ ನೀಡುವ ಮೂಲಕ ಮದ್ಯದಂಗಡಿಯಲ್ಲಿ ಚಲಾವಣೆ ಮಾಡಲಾಗುತ್ತಿದೆ. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ತೋಟದ ಮನೆಗಳಲ್ಲಿ ಬಾಡೂಟ ಸಿದ್ಧಪಡಿಸಿ ಗುಂಡಿನ ಜೊತೆಗೆ ಸರಬರಾಜು ಮಾಡಲಾಗುತ್ತಿದೆ.
ಬಹು ಮುಖ್ಯ ಸಂಗತಿ ಎಂದರೆ ಕಳೆದ ಬಾರಿಯ ಚುನಾವಣೆಯಿಂದ ಪಾಠ ಕಲಿತಿರುವ ಕೆಲ ಅಭ್ಯರ್ಥಿಗಳು ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ ಹಣ ಹಾಗೂ ಮದ್ಯ ದಾಸ್ತಾನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಇದು ಹೊರಬರಲಿದೆ. ಆದರೆ ಹಂಚಿಕೆಗೆ ಹೋದ ಸಂದರ್ಭದಲ್ಲಿ ಪ್ರತಿಪಕ್ಷಗಳ ಕಣ್ಣಿಗೆ ಬಿದ್ದರೆ ಸೀಜ್ ಆಗಬಹುದು ಎಂಬ ಭೀತಿಯಿಂದ ಬಲು ಎಚ್ಚರಿಕೆಯಿಂದ ಈ ಕಾರ್ಯ ನಿರ್ವಹಿಸಲು ತಮ್ಮ ಆಪ್ತರಿಗೆ ಕೆಲ ಅಭ್ಯರ್ಥಿಗಳು ಸೂಕ್ತ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.