ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಕೆಲವೊಂದು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿರುವ ಮಧ್ಯೆ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ ಸ್ವಾಮೀಜಿಯೊಬ್ಬರು ಮಹತ್ವದ ಘೋಷಣೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಈ ಮೊದಲು ಮನವಿ ಮಾಡಲಾಗಿತ್ತು. ಆದರೆ ಎರಡೂ ಪಕ್ಷಗಳು ಸಹ ಇದಕ್ಕೆ ಮನ್ನಣೆ ನೀಡದ ಕಾರಣ ನೇಕಾರ ಸಮುದಾಯದ ಸ್ವಾಮೀಜಿಗಳಾದ ವೀರ ಭಿಕ್ಷಾವರ್ತಿ ಮಠದ ಶಿವಶಂಕರ ಶ್ರೀಗಳು ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪ್ರಸಕ್ತ ತಲೆದೋರಿರುವ ಭ್ರಷ್ಟಾಚಾರ ಹಾಗೂ ತಾತ್ಸಾರ ಧೋರಣೆಯಿಂದ ಬೇಸತ್ತು ಆಧ್ಯಾತ್ಮ ಕ್ಷೇತ್ರದಿಂದ ರಾಜಕೀಯ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದೇನೆ. ನನಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನೇಕಾರ ಸಮುದಾಯದ ಮುಖಂಡರು ಹಾಗೂ ಭಕ್ತರ ಬೆಂಬಲವಿದೆ. ಜೊತೆಗೆ ರೈತರು ಕೂಡ ಬೆಂಬಲಿಸಲಿದ್ದಾರೆ ಎಂದು ಹೇಳಿದ್ದಾರೆ.