ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ಜೊತೆಗೆ ಚುನಾವಣಾ ಅಕ್ರಮ ತಡೆಗಟ್ಟಲು ಸಹ ಅಧಿಕಾರಿಗಳ ಬೇಟೆ ಮುಂದುವರೆದಿದ್ದು, ಕೋಟ್ಯಾಂತರ ರೂಪಾಯಿ ನಗದು ಹಾಗೂ ಅಷ್ಟೇ ಮೌಲ್ಯದ ಗಿಫ್ಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ನೂರು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದ್ದು, ಈ ಪೈಕಿ 36 ಕೋಟಿ ರೂಪಾಯಿ ನಗದಾಗಿದೆ. ಅಲ್ಲದೆ 26.53 ಕೋಟಿ ರೂಪಾಯಿ ಮೌಲ್ಯದ ಮದ್ಯ ಸಹ ಸೀಜ್ ಮಾಡಲಾಗಿದೆ. ಜೊತೆಗೆ ವಶಪಡಿಸಿಕೊಂಡಿರುವ ಗಿಫ್ಟ್ ಗಳ ಮೌಲ್ಯ 15.46 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಶನಿವಾರ ಒಂದೇ ದಿನ ಯಾವುದೇ ದಾಖಲೆ ಇಲ್ಲದ 88.50 ಲಕ್ಷ ರೂಪಾಯಿ ನಗದು, 30.86 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್, ಅಲ್ಲದೆ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ 1.67 ಕೋಟಿ ರೂಪಾಯಿ ಮೌಲ್ಯದ 55,498 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ನಗದು ಸೇರಿದಂತೆ ಒಟ್ಟಾರೆ 33.23 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.