ಟೆಸ್ಲಾ ಸ್ವಯಂಚಾಲಿತ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದಲ್ಲಿ ನಡೆದಿರೋ ಈ ಭಯಾನಕ ಅಪಘಾತದ ವಿಡಿಯೋ ಕೂಡ ವೈರಲ್ ಆಗಿದೆ. ಬ್ರೇಕ್ ಸಿಸ್ಟಮ್ ಇದ್ದಕ್ಕಿದ್ದಂತೆ ವಿಫಲಗೊಂಡಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ.
ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಚಲಿಸ್ತಾ ಇದ್ದ ಟೆಸ್ಲಾದ ಸ್ವಯಂಚಾಲಿತ Y ಮಾಡೆಲ್ ಕಾರು, ಇದ್ದಕ್ಕಿದ್ದಂತೆ ಕಂಟ್ರೋಲ್ ತಪ್ಪಿದೆ. ಕಾರಿಗೆ ಬ್ರೇಕ್ ಬೀಳಲೇ ಇಲ್ಲ. ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲ ಡಿಕ್ಕಿ ಹೊಡೆಯುತ್ತ ಮುಂದೆ ಸಾಗಿದೆ. ನಂತರ ಕಾರು ಸ್ಫೋಟಗೊಂಡು ನಿಂತಿದೆ. ಕಾರು ಯರ್ರಾಬಿರ್ರಿ ಚಲಿಸಿದ್ದರಿಂದ ಸರಣಿ ಅನಾಹುತಗಳು ಸಂಭವಿಸಿವೆ. ಹಲವಾರು ವಾಹನಗಳಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಪಾದಚಾರಿಗಳಿಗೂ ಗುದ್ದಿದೆ.
ಕೊನೆಯಲ್ಲಿ ರಸ್ತೆ ಬದಿಯ ಕಟ್ಟಡವೊಂದರ ಅಂಚಿಗೆ ಡಿಕ್ಕಿ ಹೊಡೆದು ಜೋರಾಗಿ ಸ್ಫೋಟಿಸಿದೆ. ಸ್ಫೋಟದ ಬಳಿಕ ಕಾರು ಮುಂದಕ್ಕೆ ಚಲಿಸಿಲ್ಲ. ಆದ್ರೆ ಅಷ್ಟರಲ್ಲಾಗ್ಲೇ ಈ ಆಟೋಮ್ಯಾಟಿಕ್ ಕಾರಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಸ್ಫೋಟಗೊಂಡ ಬಳಿಕ ಸುತ್ತಲೂ ಭಾರೀ ಬೆಂಕಿ ಮತ್ತು ಹೊಗೆ ಆವರಿಸಿತ್ತು. ಹೊಗೆ ತಾಳಲಾರದೆ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.