ಚಿನ್ನ ಕಳ್ಳಸಾಗಣೆಗೆ ಆರೋಪಿಗಳು ತರಹೇವಾರಿ ವಿಧಾನಗಳ ಮೊರೆ ಹೋಗುತ್ತಾರೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿಕೊಂಡು ಬರುವುದು, ಸೂಟ್ಕೇಸ್ ಹಿಡಿಕೆಯನ್ನು ಚಿನ್ನದಲ್ಲಿ ಮಾಡಿಸಿ ತರುವುದು ಸೇರಿದಂತೆ ಹಲವು ಮಾರ್ಗ ಅನುಸರಿಸುತ್ತಾರೆ.
ಆದರೆ ಇನ್ನೊಬ್ಬ ಆರೋಪಿ ಮತ್ತೊಂದು ವಿಭಿನ್ನ ಮಾರ್ಗ ಹಿಡಿದಿದ್ದು ಇದನ್ನು ಕಂಡು ಸ್ವತಃ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಹೌದು, ಇಂತಹದೊಂದು ಪ್ರಕರಣ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದು ಕೊನೆಗೂ ಆತನ ಕಳ್ಳಾಟ ಬಯಲಾದ ಬಳಿಕ ಅಧಿಕಾರಿಗಳು ಬಂಧಿಸಿದ್ದಾರೆ.
ಅರಬ್ ನಿಂದ ಈತ ಸೋಮವಾರ ಬೆಳಗ್ಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಆತಂಕದ ಮುಖಭಾವದಲ್ಲಿ ಅತ್ತಿತ್ತ ಅಡ್ಡಾಡುತ್ತಿದ್ದ. ಅನುಮಾನಗೊಂಡ ಅಧಿಕಾರಿಗಳು ಆತನನ್ನು ತಪಾಸಣೆ ಮಾಡಿದಾಗ ಏನೂ ಕಂಡುಬಂದಿರಲಿಲ್ಲ. ಆದರೆ ಸ್ಕ್ಯಾನ್ ಮಾಡಿದ ವೇಳೆ ಅಸಲಿಯತ್ತು ಬಹಿರಂಗವಾಗಿದೆ.
ಈತ ಎರಡು ಪದರಿನ ಪ್ಯಾಂಟ್ ಧರಿಸಿದ್ದು, ಇದರ ನಡುವೆ ಒಂದು ಪದರ ಚಿನ್ನ ಲೇಪನ ಮಾಡಿರುವುದು ಸ್ಕ್ಯಾನಿಂಗ್ ವೇಳೆ ಕಂಡುಬಂದಿದೆ. ಒಟ್ಟು 302 ಗ್ರಾಂ ಚಿನ್ನ ಲೇಪನ ಮಾಡಿಕೊಂಡಿದ್ದು, ಇದರ ಮೌಲ್ಯ ಬರೋಬ್ಬರಿ 14 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಮುಂದಿನ ತನಿಖೆ ನಡೆಸುತ್ತಿದ್ದಾರೆ.