ನೀವೇನಾದ್ರೂ ಚಿನ್ನ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗೆ ಕೊಂಚ ಸಮಾದಾನ ಕೊಡಬಹುದು. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ತಗ್ಗಿದ್ದು, ಈ ಕಾರಣದಿಂದಾಗಿ ಭಾರತದ ಮಾರುಕಟ್ಟೆಯಲ್ಲೂ ಬಂಗಾರ ಸ್ವಲ್ಪ ಅಗ್ಗವಾಗಿದೆ.
ಬುಧವಾರ ಚಿನ್ನದ ದರ 52 ಸಾವಿರದ ಸಮೀಪ ಬಂದಿದೆ. ಬೆಳ್ಳಿ ಬೆಲೆ ಕೂಡ ಇಳಿಮುಖವಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ ನಲ್ಲಿ 24-ಕ್ಯಾರೆಟ್ ಚಿನ್ನದ ಬೆಲೆಯು ಶೇ.0.69 ಕಡಿಮೆಯಾಗಿ 10 ಗ್ರಾಂಗೆ 52,383 ರೂಪಾಯಿಗೆ ಬಂದು ತಲುಪಿದೆ. ಬೆಳ್ಳಿ ಕೂಡ 69 ಸಾವಿರಕ್ಕಿಂತ ಕೆಳಗಿಳಿದಿದೆ.
ಬೆಳ್ಳಿಯ ಬೆಲೆಯು ಶೇಕಡಾ 0.82 ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 68,203 ರೂಪಾಯಿ ಆಗಿದೆ. ಯುಎಸ್ ಡಾಲರ್ ಮೌಲ್ಯ ಅತ್ಯುನ್ನತ ಮಟ್ಟದಲ್ಲಿದೆ. ಇದೇ ಕಾರಣಕ್ಕೆ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ. US ಟ್ರೆಝರಿ ಬಾಂಡ್ ಮೌಲ್ಯ ಕೂಡ 2.9 ಪ್ರತಿಶತಕ್ಕೆ ಹೆಚ್ಚಿದೆ. ಇದು ಚಿನ್ನದ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ. ಆದರೂ ಚಿನ್ನ ಪ್ರಸ್ತುತ ಬೆಲೆ ಇಳಿಕೆಯತ್ತಲೇ ಮುಖಮಾಡಿದೆ.