ಬೆಂಗಳೂರು : ಸೆಲೆಬ್ರಿಟಿ ಹಾಗೂ ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗ ಪ್ರವೇಶಿಸುವುದು ಹೊಸತೇನಲ್ಲ. ಚಿತ್ರರಂಗದಲ್ಲಿ ಬಹುಪಾಲು ಸಂಖ್ಯೆಯಲ್ಲಿ ಇಂತಹ ದೊಡ್ಡ ದೊಡ್ಡ ವ್ಯಕ್ತಿಗಳ ಮಕ್ಕಳೇ ತುಂಬಿದ್ದಾರೆ. ಸದ್ಯ ಈ ಸಾಲಿಗೆ ಮತ್ತೊಬ್ಬ ರಾಜಕಾರಣಿಯ ಮಗ ಸೇರ್ಪಡೆಯಾಗುತ್ತಿದ್ದಾರೆ.
ಬಿಜೆಪಿಯ ಮಾಜಿ ನಾಯಕ ಗಾಲಿ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಉತ್ಸುಕತೆಯಲ್ಲಿದ್ದಾರೆ. ಹೀಗಾಗಿಯೇ ನಟಿಸಲು ಎಲ್ಲ ರೀತಿಯ ತಯಾರಿಗಳನ್ನು ಕಿರೀಟಿ ಮಾಡಿಕೊಂಡಿದ್ದಾರೆ. ಅವರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಿನಿಮಾ ಕೂಡ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿರುವ ಸದ್ಯದ ಮಾಹಿತಿಯಂತೆ, ಇತ್ತೀಚೆಗಷ್ಟೇ ದಿವಂಗತ ಪುನೀತ್ ರಾಜ್ ಕುಮಾರ್ ಮಾಲೀಕತ್ವದ ಪಿ ಆರ್ ಕೆ ಪ್ರೊಡಕ್ಷನ್ ಮೂಲಕ ಮೂಡಿ ಬಂದಿದ್ದ, ಮಾಯಾ ಬಜಾರ್ 2016 ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಅವರು ಕಿರೀಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಈಗ ಎಂಬ ಚಿತ್ರದ ನಿರ್ಮಾಪಕರು ಕಿರೀಟಿ ಅವರ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿದೆ.
ಜನಾರ್ದನ ರೆಡ್ಡಿ ಅವರ ಪುತ್ರ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಸಾಹಸಕ್ಕಾಗಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದಿದ್ದಾರೆ. ಯುಕೆಯಲ್ಲಿ ವಿದ್ಯಾಭ್ಯಾಸ ಮಾಡುವುದುರೊಂದಿಗೆ ನಟನೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಜಿಮ್ ಗೆ ಹೋಗಿ ದೇಹ ಸದೃಢವಾಗಿಟ್ಟುಕೊಂಡಿದ್ದಾರೆ.
ಅವರು ನಟಿಸುವ ಚಿತ್ರದ ಹೆಸರು ಮಾತ್ರ ಇದುವರೆಗೂ ತಿಳಿದು ಬಂದಿಲ್ಲ. ಅದ್ದೂರಿಯಾಗಿಯೇ ಕಿರೀಟಿ ಚಿತ್ರರಂಗ ಪ್ರವೇಶಿಸಲಿದ್ದಾರೆ. ಮೊದಲ ಚಿತ್ರವೇ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿ ಬರಲಿದೆ ಎಂದು ನಿರ್ದೇಶಕ ರಾಧಾಕೃಷ್ಣ ಹೇಳಿದ್ದಾರೆ.