
ಭಾರತೀಯ ಅಂಚೆ ಇಲಾಖೆಯು ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹೆಸರಲ್ಲಿ ಹೊಸ ವಿಶೇಷ ‘ಪೋಸ್ಟಲ್ ಎನ್ವಲಪ್’ ಅನ್ನು ಹೊರತರುತ್ತಿದೆ. ಅಂಚೆ ಇಲಾಖೆ ನೂರಾರು ವರ್ಷಗಳಿಂದ ದೇಶದ ವಿಶೇಷ ಘಟನೆಗಳು, ಪ್ರಶಸ್ತಿಗಳು ಅಥವಾ ವ್ಯಕ್ತಿಗಳ ಸಾಧನೆಗಳನ್ನು ದಾಖಲಿಸಲು ‘ವಿಶೇಷ ಅಂಚೆ ಲಕೋಟೆ’ಯನ್ನು ಬಿಡುಗಡೆ ಮಾಡುತ್ತಿದೆ. ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸಾಧನೆಯ ನೆನಪಿಗಾಗಿ ಲಕೋಟೆಯನ್ನು ಬಿಡುಗಡೆ ಮಾಡುತ್ತಿದೆ.
ಅಂಚೆ ಇಲಾಖೆಯ ಪ್ರತಿನಿಧಿ ಮಾದೇಶ್, ಕಿಚ್ಚ ಸುದೀಪ ಅವರ ನಿವಾಸಕ್ಕೆ ಭೇಟಿ ನೀಡಿ ಲಕೋಟೆ ಬಿಡುಗಡೆ ಕಾರ್ಯಕ್ರಮಕ್ಕೆ ನಟನನ್ನು ಆತ್ಮೀಯವಾಗಿ ಆಹ್ವಾನಿಸಿದರು. ಶೀಘ್ರದಲ್ಲೇ ಈ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತದೆ. ಅಂಚೆ ಇಲಾಖೆಯ ಈ ಕ್ರಮವನ್ನು ಕನ್ನಡ ಚಿತ್ರರಂಗ ಶ್ಲಾಘಿಸಿದೆ. ಕಿಚ್ಚ ಸುದೀಪ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಸ್ಪರ್ಶ, ಹುಚ್ಚ, ನಂದಿ, ಕಿಚ್ಚ, ಸ್ವಾತಿ ಮುತ್ತು, ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ, ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಈಗ ಸೇರಿದಂತೆ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಸಲ್ಮಾನ್ ಖಾನ್ ಅಭಿನಯದ “ದಬಾಂಗ್ 3” ಹಿಂದಿ ಚಿತ್ರದಲ್ಲೂ ಸುದೀಪ್ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರ ತೆರೆಗೆ ಬಂದಿದೆ. ಸದ್ಯ ಕಿಚ್ಚ ಸುದೀಪ್, “ಬಿಗ್ ಬಾಸ್ ಕನ್ನಡ”ದ ಮೊದಲ OTT ಆವೃತ್ತಿಯನ್ನು ಹೋಸ್ಟ್ ಮಾಡ್ತಿದ್ದಾರೆ.