ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ ಕೇಸ್ ದಾಖಲಾಗಿದೆ. ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಠದ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲಿ ದೂರು ನೀಡಿದ್ದು, ಚಿತ್ರದುರ್ಗಕ್ಕೆ ಕೇಸ್ ವರ್ಗಾವಣೆಯಾಗಿದೆ. ಮೈಸೂರಿನಿಂದ ಇಬ್ಬರು ಬಾಲಕಿಯರನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಬರಲಾಗಿದೆ. ಬಿಗಿ ಭದ್ರತೆಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ ದೂರುದಾರ ಬಾಲಕಿಯರನ್ನು ಬಾಲಭವನದಲ್ಲಿ ಇರಿಸಲಾಗಿದೆ.
ಬೆಳಗ್ಗೆ 10 ವೇಳೆಗೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡುವ ಸಾಧ್ಯತೆ ಇದೆ. ನಂತರ ವೈದ್ಯಕೀಯ ಪರೀಕ್ಷೆ, ಪೊಲೀಸರಿಂದ ಸ್ಥಳ ಮಹಜರು ನಡೆಸಲಾಗುವುದು. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.