ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಭೂ ಕಂಪನದ ಅನುಭವವಾಗಿದ್ದು, ಜನರು ಮತ್ತೆ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.
ಜಿಲ್ಲೆಯಲ್ಲಿನ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6ರಷ್ಟು ದಾಖಲಾಗಿದೆ. ಜಿಲ್ಲೆಯ ಗೊಲ್ಲನಹಳ್ಳಿ ಗ್ರಾಪಂ ವ್ಯಾಪ್ತಿಯ ಬೀರಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಅಡ್ಡಗಲ್, ಶೆಟ್ಟಿಗೆರೆ ಗ್ರಾಮದ ಸುತ್ತಮುತ್ತ ಭೂಕಂಪನದ ಅನುಭವವಾಗಿದೆ.
ನಿದ್ರೆಯಲ್ಲಿದ್ದ ಜನರು ಭೂಕಂಪನದ ಅನುಭವವಾಗುತ್ತಿದ್ದಂತೆ ಮನೆಯಿಂದ ಹೊರಗೆ ಬಂದಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿರುವುದಕ್ಕೆ ಜನರು ತೀವ್ರ ಆತಂಕ ಹಾಗೂ ಭಯದಲ್ಲಿದ್ದಾರೆ.
ಕಳೆದ ತಿಂಗಳಷ್ಟೇ ಈ ಪ್ರದೇಶದಲ್ಲಿ ಭೂಕಂನಪದ ಅನುಭವವಾಗಿತ್ತು. ಮನೆಯಲ್ಲಿದ್ದ ವಸ್ತುಗಳು ಕೆಳಗೆ ಬಿದ್ದು, ಹಲವರ ಮನೆಗಳು ಕೂಡ ಬಿರುಕು ಬಿಟ್ಟಿದ್ದವು. ಹೀಗಾಗಿ ಕೆಲವು ಗ್ರಾಮಗಳಲ್ಲಿನ ಜನರು ಊರು ತೊರೆದಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೆ ಭೂಕಂಪನದ ಅನುಭವವಾಗುತ್ತಿರುವುದಕ್ಕೆ ಜನರು ಚಿಂತಾಕ್ರಾಂತರಾಗಿದ್ದಾರೆ.