32 ವರ್ಷಗಳ ಹಿಂದೆ ರಾಜೀವ್ ಗಾಂಧಿ ಹೈದ್ರಾಬಾದ್‌ನ ಚಾರ್ಮಿನಾರ್ ನಿಂದ ‘ಸದ್ಭಾವನಾ ಯಾತ್ರೆ’ ಆರಂಭಿಸಿದ್ದರು. ಇಂದು ಅದೇ ಜಾಗದಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು.
ಜನದಟ್ಟಣೆಯಿಂದ ಕೂಡಿದ ಚಾರ್ಮಿನಾರ್ ಪ್ರದೇಶದಲ್ಲಿ ಜನಸಾಗರದ ನಡುವೆ ರಾಹುಲ್ ಗಾಂಧಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಾರ್ಮಿನಾರ್‌ಗೆ ಹೋಗುವ ರಸ್ತೆಯಲ್ಲಿ ರಾಹುಲ್ ಗಾಂಧಿ ತ್ರಿವರ್ಣ ಧ್ವಜ ಹಾಗೂ ಪಕ್ಷದ ಧ್ವಜಗಳೊಂದಿಗೆ ಜೋರಾಗಿ ಜಯಘೋಷಗಳು ಮತ್ತು ‘ಭಾರತ್ ಜೋಡೋ’ ಘೋಷಣೆಗಳೊಂದಿಗೆ ಚಾರ್ಮಿನಾರ್ ತಲುಪಿದರು. ವೇದಿಕೆಯಲ್ಲಿದ್ದ ತಮ್ಮ ತಂದೆ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ರಾಹುಲ್ ಗಾಂಧಿ ಪುಷ್ಪ ನಮನ ಸಲ್ಲಿಸಿದರು.
1990ರ ಅಕ್ಟೋಬರ್ 19ರಂದು ರಾಜೀವ್ ಗಾಂಧಿ ಅವರು ಸದ್ಭಾವನಾ ಯಾತ್ರೆ ಆರಂಭಿಸಿದ ಜಾಗವೇ ರಾಹುಲ್ ಗಾಂಧಿ ತ್ರಿವರ್ಣ ಧ್ವಜಾರೋಹಣ ಮಾಡಿದ ಸ್ಥಳವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರತಿ ವರ್ಷ ಈ ದಿನದಂದು ಇಲ್ಲಿ ಕಾಂಗ್ರೆಸ್ ರಾಷ್ಟ್ರಧ್ವಜಾರೋಹಣ ಮಾಡುತ್ತಿದೆ. ಈ ಬಾರಿ ಅಕ್ಟೋಬರ್ 19ರಂದು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಮಾಡುತ್ತಿದ್ದೇವೆ ಎಂದರು.