ಬೇಸಿಗೆಯಲ್ಲಿ ಚಾರಣಕ್ಕೆ ಸೂಕ್ತವಾದ ಪ್ರದೇಶವೆಂದರೆ ಬೆಳ್ತಂಗಡಿ ಸಮೀಪದಲ್ಲಿರುವ ಗಡಾಯಿಕಲ್ಲು ಅಥವಾ ಜಮಲಾಬಾದ್ ಕೋಟೆ.
ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ಮುಖ್ಯ ರಸ್ತೆಯಲ್ಲಿ ಸಂಚರಿಸುವಾಗ ಆಕರ್ಷಕವಾಗಿ ಕಾಣಿಸುವ ಬೃಹದಾಕಾರದ ಕಲ್ಲು ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. ಬೇಸಿಗೆಯಲ್ಲಿ ಮಾತ್ರ ಇದರ ಮೇಲೇರಲು ಅವಕಾಶ.
ಇದರ ಮೇಲೇರಲು ಅನುಮತಿ ಬೇಕು. ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗಬಹುದಾದರೂ ಕಸವನ್ನು ಮೇಲೆಸೆದು ಬರುವಂತಿಲ್ಲ.
ಕೋಟೆಯ ಬುಡಭಾಗದಲ್ಲಿ ಅಲ್ಲಲ್ಲಿ ಟಿಪ್ಪು ಬಳಸಿದ ಬೀಸುವ ಕಲ್ಲು, ಫಿರಂಗಿ ಮತ್ತಿತರ ಅವಶೇಷಗಳು ಕಾಣಸಿಗುತ್ತವೆ. ಟಿಪ್ಪು ಸುಲ್ತಾನ್ ಈ ಕೋಟೆಯನ್ನು ವಶಪಡಿಸಿಕೊಂಡಿದ್ದ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಲು ಈ ಕೋಟೆಯನ್ನು ಬಳಸಿದ್ದ ಎನ್ನುತ್ತದೆ ಇತಿಹಾಸ.
ಆರಂಭದಲ್ಲಿ ಕಡಿದಾದ ದಾರಿ, ಬಳಿಕ ಕಲ್ಲಿನ ಮೆಟ್ಟಿಲು ಮುಂದೆ ಕಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1500ಕ್ಕೂ ಹೆಚ್ಚಿನ ಮೆಟ್ಟಿಲು ಏರಿ ತುದಿಯನ್ನು ತಲುಪಬಹುದು. ಕಲ್ಲಿನ ಮೇಲ್ಭಾಗವೂ 1-2 ಕಿಮೀನಷ್ಟು ಅಗಲವಾಗಿದೆ. ಬೆಟ್ಟದ ಮಧ್ಯದಲ್ಲಿ ಕಲ್ಲಿನಲ್ಲೇ ನಿರ್ಮಾಣಗೊಂಡ ಕೆರೆಯೊಂದಿದ್ದು ಬಿರುಬೇಸಿಗೆಯಲ್ಲೂ ನೀರನ್ನು ತನ್ನೊಡಲೊಳಗೆ ಉಳಿಸಿಕೊಳ್ಳುವುದು ವಿಶೇಷ. ಕೋಟೆಯ ತುತ್ತತುದಿಯಲ್ಲಿ ಸಂಪೂರ್ಣ ಶಿಥಿಲಗೊಂಡ ಫಿರಂಗಿ ಮನೆಯೊಂದಿದ್ದು ಇನ್ನೇನು ಬೀಳುವ ಸ್ಥಿತಿಯಲ್ಲಿದೆ.
ಇಲ್ಲಿ ಟಿಪ್ಪುವಿನ ಸೈನಿಕರು ಅವಶ್ಯವಿದ್ದ ಫಿರಂಗಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು ಎನ್ನಲಾಗಿದೆ. ಸೂರ್ಯೋದಯಕ್ಕೂ ಮುನ್ನ ಚಾರಣ ಆರಂಭಿಸಿದರೆ ಸಂಜೆಯೊಳಗೆ ಕೆಳಗಿಳಿದು ಬರಬಹುದು. ಆಹಾರ ಪಾರ್ಸೆಲ್ ಕಡ್ಡಾಯ. ಮಳೆಗಾಲದಲ್ಲಿ ಇಲ್ಲಿ ಚಾರಣಕ್ಕೆ ಅವಕಾಶವಿಲ್ಲ.