
ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರವಾಗಿರೋ ಪುನೀತ್ ರಾಜ್‌ಕುಮಾರ್ ಅವರನ್ನ ಒಂದಿಲ್ಲ ಒಂದು ರೀತಿಯಲ್ಲಿ ನೆನಪು ಮಾಡಿಕೊಳ್ತಾನೆ ಇರ್ತಾರೆ. ಈಗ ಚಾಮರಾಜಪೇಟೆ ಕ್ಷೇತ್ರದ ಆಜಾದ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಯೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿನ ನೂತನ ಬಡಾವಣೆಯನ್ನ ಉದ್ಘಾಟಿಸಿ ಮಾತನಾಡಿದ ಚಾಮರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್‌ಖಾನ್, ಪುನೀತ್ ರಾಜ್‌ಕುಮಾರ್ ಹೆಸರನ್ನ ಈ ಬಡಾವಣೆಗೆ ಇಟ್ಟಿರುವುದು ನನಗೆ ತುಂಬಾ ಸಂತೋಷವನ್ನ ಉಂಟುಮಾಡಿದೆ. ಅಪ್ಪು ಅವರ ವ್ಯಕ್ತಿತ್ವ ಅಪರೂಪದಲ್ಲೇ ಅಪರೂಪವಾಗಿರೋದು. ಅವರೊಂದು ಅದ್ಭುತ ಶಕ್ತಿ. ಅವರನ್ನ ಅಭಿಮಾನಿಗಳು ಎಷ್ಟು ಇಷ್ಟಪಡುತ್ತಾರೆ ಅನ್ನೋದಕ್ಕೆ, ನೂರಾರು ಉದಾಹರಣೆಗಳೇ ಸಿಗುತ್ತೆ. ನಾನು ರಾಜಕೀಯಕ್ಕೆ ಬರುವ ಮುಂಚೆಯಿಂದಲೂ ನಮ್ಮ ಕುಟುಂಬ ಮತ್ತು ಡಾ. ರಾಜ್‌ಕುಮಾರ್ ಕುಟುಂಬ ನಡುವೆ ಅವಿನಾಭಾವ ಬಾಂಧವ್ಯ ಇತ್ತು. ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರಲ್ಲಿದ್ದ ಸರಳತೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ ಅಂತ ಹೇಳಿದರು.
ಅವರು ನಮ್ಮನ್ನ ಅಗಲುವ ಹಿಂದಿನ ದಿನ ನನ್ನ ಮಗನೊಂದಿಗೆ ಫೋನ್‌ಕಾಲ್‌ನಲ್ಲಿ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ. ಆ ದಿನ ಮಾತನಾಡಿದ ಆಡಿಯೋ ಪ್ಲೇ ಮಾಡಿ ಪವರ್‌ಸ್ಟಾರ್ ಮತ್ತು ನಮ್ಮ ನಡುವಿನ ಸ್ನೇಹವನ್ನು ಮೆಲುಕು ಹಾಕಿದ್ದಾರೆ ಶಾಸಕರು.
ಇನ್ನೂ ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಸಿ. ರಮೇಶ್, ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಸಂಘದ ಅಧ್ಯಕ್ಷರಾದ ಸಿದ್ಧಯ್ಯ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಪ್ಪು ಮೇಲಿನ ಅಭಿಮಾನಕ್ಕೆ ಇನ್ನೂ ಹತ್ತಾರು ಸಾಕ್ಷಿಗಳು ಸಿಗುತ್ತಲೆ ಹೋಗುತ್ತೆ. ಮೊನ್ನೆಯಷ್ಟೆ ರಾಘವೇಂದ್ರ ರಾಜ್‌ಕುಮಾರ್ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅಪ್ಪುವಿನ ಅಭಿಮಾನಿಯೊಬ್ಬರು, ದೇವರ ಕಾರ್ಯಕ್ರಮದಲ್ಲಿ ತಲೆಯ ಮೇಲೆ ದೇವರ ಹೊತ್ತುಕೊಳ್ಳುವ ಹಾಗೆ ಅಪ್ಪುವಿನ ಮೂರ್ತಿಯನ್ನ ಹೊತ್ತುಕೊಂಡಿದ್ದಾರೆ. ಇದು ಅಪ್ಪು ಅಂದರೆ ಅಭಿಮಾನಿಗಳಿಗೆ ಅದೆಷ್ಟು ಪ್ರೀತಿ ಎಂಬುದು ತಿಳಿಯುತ್ತದೆ.
ಅಪ್ಪು ಹೋದ ನಂತರ ಅಭಿಮಾನಿಗಳು ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನ ಪೂಜಿಸುತ್ತಿದ್ದಾರೆ. ಕೆಲವೇ ಕೆಲವು ದಿನಗಳ ಹಿಂದೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ ಅಪ್ಪು ಪ್ರತಿಮೆಯನ್ನ ಅನಾವರಣ ಮಾಡಲಾಗಿತ್ತು. ಈ ಪ್ರತಿಮೆ ಏನಿಲ್ಲ ಅಂದರೂ 7.4 ಅಡಿ ಎತ್ತರದ ಪ್ರತಿಮೆ. ಕರುನಾಡಿಗೆ ಹೆಮ್ಮೆಯ ವಿಚಾರ. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳ ಜೊತೆ ರಾಘವೇಂದ್ರ ರಾಜ್‌ಕುಮಾರ್, ನಟ ಅಜಯ್‌ರಾವ್, ನಿರ್ದೇಶಕ ಸಂತೋಷ್ ಹಾಗೂ ಆನಂದ್‌ರಾವ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.