ಚಾಕೋಲೆಟ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ, ಆದರೆ ಇದನ್ನು ತಿನ್ನುವುದರಿಂದ ಅವರ ಹಲ್ಲು ಹುಳುಕಾಗುವ ಸಾಧ್ಯತೆ ಇದೆ. ಹೊಟ್ಟೆನೋವಿನ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿಯೇ ಆರೋಗ್ಯಕರವಾದ ಈ ಚಾಕೋಲೆಟ್ ಕೊಕೊನಟ್ ಪ್ರೋಟಿನ್ ಲಡ್ಡು ಮಾಡಿಕೊಡಿ. ಮಕ್ಕಳಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ – ಖರ್ಜೂರ, 1 ¼ ಕಪ್ – ವಾಲ್ ನಟ್, 5 ಟೇಬಲ್ ಸ್ಪೂನ್ – ಕೊಕೊ ಪೌಡರ್, 3 ಟೇಬಲ್ ಸ್ಪೂನ್ – ಮಾಪ್ಲೆ ಸಿರಪ್, 1 ಕಪ್ – ಕೊಬ್ಬರಿ ತುರಿ, 1 ಟೇಬಲ್ ಸ್ಪೂನ್ – ತೆಂಗಿನೆಣ್ಣೆ, 2 ಟೇಬಲ್ ಸ್ಪೂನ್ – ಉಗುರು ಬೆಚ್ಚಗಿನ ನೀರು.
ಮಾಡುವ ವಿಧಾನ:
ಖರ್ಜೂರವನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಬಿಸಿ ನೀರು ಹಾಕಿ 20 ನಿಮಿಷಗಳ ಕಾಲ ನೆನೆಸಿ. ನಂತರ ಮಿಕ್ಸಿ ಜಾರಿಗೆ ವಾಲ್ ನಟ್ ಹಾಕಿ ಅದನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ನೆನೆಸಿಟ್ಟುಕೊಂಡ ಖರ್ಜೂರ (ಬೀಜ ತೆಗೆದಿರಬೇಕು)ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಈ ಮಿಶ್ರಣ ತುಂಬಾ ದಪ್ಪಗಾದರೆ 2 ಟೇಬಲ್ ಸ್ಪೂನ್ ಉಗುರುಬೆಚ್ಚಗಿನ ನೀರು ಸೇರಿಸಿಕೊಳ್ಳಿ.
ನಂತರ ಈ ಮಿಶ್ರಣವನ್ನು ಒಂದು ಬೌಲ್ ಗೆ ತೆಗೆದುಕೊಂಡು ಅದಕ್ಕೆ ಕೊಕೊ ಪೌಡರ್, ಕೊಬ್ಬರಿ ತುರಿ, ಮಾಪ್ಲೆ ಸಿರಪ್ ಸೇರಿಸಿ ಮಿಕ್ಸ್ ಮಾಡಿ. ನಂತರ ಕೈಗೆ ತುಸು ತೆಂಗಿನೆಣ್ಣೆ ಸವರಿಕೊಂಡು ಈ ಮಿಶ್ರಣದಿಂದ ಉಂಡೆ ಕಟ್ಟಿ. ಸ್ವಲ್ಪ ಕೊಬ್ಬರಿ ತುರಿಯಲ್ಲಿ ಹೊರಳಾಡಿಸಿ ಫ್ರಿಜರ್ ನಲ್ಲಿ 30 ನಿಮಿಷಗಳ ಕಾಲ ಇಡಿ. ರುಚಿಕೆರವಾದ ಪ್ರೋಟಿನ್ ಲಡ್ಡು ಸವಿಯಲು ಸಿದ್ಧ.