ಶಿವಮೊಗ್ಗ: ಗಾಂಧಿ ಬಜಾರಿನ ಬಟ್ಟೆ ಮಾರ್ಕೇಟ್ (ಚೋರ್ ಬಜಾರ್) ನಲ್ಲಿ ಮೊನ್ನೆ ಸಂಜೆ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸುಮಾರು ಒಂಬತ್ತು ತಿಂಗಳ ಹಿಂದೆ ಮೃತ ಸೆಂಧಿಲ್, ಸ್ನೇಹಿತ ಸಂತೋಷ್ (ಜೋಗಿ ಸಂತು) ವಿನ ಜೊತೆಯಲ್ಲಿ ಹಣದ ವ್ಯವಹಾರದ ವಿಷಯದಲ್ಲಿ ಜಗಳವಾಗಿದ್ದು, ಆಗ ಸೆಂಧಿಲ್, ಜೋಗಿ ಸಂತುವಿನ ಮೇಲೆ ಅಟ್ಯಾಕ್ ಮಾಡಿದ್ದ. ಈ ಅಟ್ಯಾಕ್ ನಿಂದ ಗಾಯಗೊಂಡಿದ್ದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿ ಸೆಂಧಿಲ್ ನನ್ನು ಜೈಲಿಗೆ ಕಳುಹಿಸಲಾಗಿತ್ತು.
ನಂತರದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಸೆಂಧಿಲ್ ಕಾಲರ್ ಏರಿಸಿಕೊಂಡು ಓಡಾಡುತ್ತಿದ್ದ ಮತ್ತು ಬಟ್ಟೆ ಬಜಾರ್ ನಲ್ಲಿ ಮನೋಜ್ ಟೆಕ್ಸ್ ಟೈಲ್ಸ್ ಎಂಬ ಹೆಸರಿನ ಬಟ್ಟೆಯಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಈಗ್ಗೆ ಒಂದು ವಾರದ ಹಿಂದೆ ಜೋಗಿ ಸಂತು ಎದುರಿಗೆ ಸಿಕ್ಕಾಗ ಸ್ವಲ್ಪ ಕಿರಿಕ್ ಕೂಡಾ ಆಗಿತ್ತು ಎನ್ನಲಾಗಿದೆ.
ಇದೇ ಜೋಗಿ ಸಂತು ಬಜಾರ್ ನ ಒಳಗಡೆ ಎರಡು ವರ್ಷಗಳ ಹಿಂದೆ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಹಾಗೆಯೇ ವ್ಯವಹಾರದಲ್ಲಿ ಲಾಸ್ ಆಗಿದ್ದರಿಂದ ಅಂಗಡಿ ತೆಗೆದಿದ್ದ ಕೂಡಾ. ಮೊನ್ನೆ ಸೆಂಧಿಲ್ ಮೇಲೆ ಅಟ್ಯಾಕ್ ಮಾಡುವಾಗ ಜೋಗಿ ಸಂತು ಮತ್ತು ಮೂವರು ಸ್ನೇಹಿತರ ಜೊತೆಯಲ್ಲಿ ಮಧ್ಯಾಹ್ನದಿಂದ ಸೆಂಧಿಲ್ ಅಂಗಡಿಯ ಮುಂದೆ ಓಡಾಡಿದ್ದಾರೆ ನಂತರ ರಾತ್ರಿ ಜೋಗಿ ಸಂತು ಹಾಗೂ ಸಹಚರರು ಮಾರ್ಕೆಟ್‍ನ ಒಳಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿ ಎದೆಯ ಭಾಗದಲ್ಲಿ ಚಾಕುವಿನಿಂದ ತಿವಿದಿದ್ದರು.
ಈ ರೀತಿಯ ಅಚಾನಕ್ ಅಟ್ಯಾಕ್ ನಿಂದ ಜೀವ ಉಳಿಸಿಕೊಳ್ಳುವ ಸಲುವಾಗಿ ತನ್ನ ಪಕ್ಕದ ಅಂಗಡಿಯ ಕೆಳಗೆ ತೂರಿಕೊಂಡಿದ್ದ. ನಂತರದಲ್ಲಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಪಡೆದಿದ್ದು ಅಂದೇ ತಡರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.