ಕೋಟ್ಯಾಂತರ ಭಾರತೀಯರು ಪ್ರತಿದಿನ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಚಹಾ ಕುಡಿದರೆ ದೇಹದಲ್ಲಿ ಚೈತನ್ಯ, ಉಲ್ಲಾಸ ಮೂಡುತ್ತದೆ ಎಂಬುದು ಅನೇಕರ ಅಭಿಪ್ರಾಯ. ಚಹಾದಲ್ಲಿ ಕೆಫೀನ್ ಇರುವ ಕಾರಣ ಇದು ನಿದ್ರೆಯನ್ನು ಓಡಿಸಲು ಸಹಕಾರಿಯಾಗಿದೆ. ಚಹಾ ಮಾಡಿದ ನಂತರ ಸಾಮಾನ್ಯವಾಗಿ ಎಲ್ಲರೂ ಬಳಸಿದ ಚಹಾ ಎಲೆಗಳನ್ನು ಎಸೆಯುತ್ತಾರೆ.
ಆದರೆ ಬಳಸಿದ ಚಹಾ ಪುಡಿ ಅಥವಾ ಎಲೆಗಳು ಎಷ್ಟು ಉಪಯುಕ್ತವಾಗಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಬಳಸಿದ ಚಹಾ ಪುಡಿಯನ್ನು ಮೊದಲು ಶುದ್ಧ ನೀರಿನಿಂದ ತೊಳೆಯಿರಿ. ಸಕ್ಕರೆ ಅಂಶವೆಲ್ಲ ಹೋದ ಬಳಿಕ ಅದನ್ನು ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದು.
ಉಪಯೋಗಿಸಿದ ಚಹಾ ಪುಡಿಯ ಪ್ರಯೋಜನಗಳು
ಪಾತ್ರೆ ಸ್ವಚ್ಛಗೊಳಿಸುವುದು
ಬೇಳೆಕಾಳುಗಳು, ತರಕಾರಿಗಳು ಅಥವಾ ಇತರ ಆಹಾರವನ್ನು ಪಾತ್ರೆಗಳಲ್ಲಿ ಬೇಯಿಸಿದಾಗ ಅದರಲ್ಲಿ ಬಹಳಷ್ಟು ಗ್ರೀಸ್ ಅಂಟಿಕೊಂಡಿರುತ್ತದೆ. ನೀರಿನಿಂದ ತೊಳೆದ ನಂತರವೂ ಅದು ಸಂಪೂರ್ಣ ಸ್ವಚ್ಛವಾಗುವುದಿಲ್ಲ. ಅದನ್ನು ಸುಲಭವಾಗಿ ಕ್ಲೀನ್ ಮಾಡಲು ಬಳಸಿದ ಚಹಾ ಪುಡಿ ಪ್ರಯೋಜನಕಾರಿಯಾಗಿದೆ. ಅದನ್ನು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿದರೆ ಕಲೆಗಳೆಲ್ಲ ಮಾಯವಾಗುತ್ತವೆ.
ಸೊಳ್ಳೆಗಳಿಂದ ಮುಕ್ತಿ
ಪ್ರತಿ ಮನೆಯಲ್ಲೂ ಸೊಳ್ಳೆಗಳು ಮತ್ತು ನೊಣಗಳು ಬೀಡು ಬಿಟ್ಟಿರುತ್ತವೆ. ಅವುಗಳನ್ನು ಓಡಿಸುವುದು ಪ್ರಯಾಸದ ಕೆಲಸ. ಇದಕ್ಕೆ ಬಳಸಿದ ಚಹಾ ಪುಡಿಯನ್ನು ಯೂಸ್ ಮಾಡಬಹುದು. ಬಳಸಿದ ಚಹಾ ಪುಡಿಯನ್ನು ನೀರಿಗೆ ಹಾಕಿ ಕುದಿಸಿ. ಆ ನೀರು ತಣ್ಣಗಾದ ಬಳಿಕ ಅದರಲ್ಲಿ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಇಡೀ ಮನೆಯನ್ನು ಒರೆಸಿ. ಹೀಗೆ ಮಾಡುವುದರಿಂದ ಸೊಳ್ಳೆ ಮತ್ತು ನೊಣಗಳು ಮನೆಯಿಂದ ಮಾಯವಾಗುತ್ತವೆ.
ಗಾಯಕ್ಕೆ ಚಿಕಿತ್ಸೆ
ಬೇಗನೆ ವಾಸಿಯಾಗದ ಗಾಯಕ್ಕೆ ಈ ಬಳಸಿದ ಚಹಾ ಪುಡಿ ಪರಿಣಾಮಕಾರಿ ಮದ್ದು. ಇದರಲ್ಲಿ ಆ್ಯಂಟಿ ಒಕ್ಸಿಡೆಂಟ್ ಗುಣಗಳಿವೆ. ಚಹಾ ಪುಡಿಯನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ನೀರಿನಲ್ಲಿ ಕುದಿಸಿ, ನಂತರ ಅದು ತಣ್ಣಗಾದ ಬಳಿಕ ಗಾಯದ ಮೇಲೆ ಹಚ್ಚಿರಿ. ಹೀಗೆ ಮಾಡುವುದರಿಂದ ಗಾಯವು ನಿಧಾನವಾಗಿ ಗುಣವಾಗಲು ಪ್ರಾರಂಭಿಸುತ್ತದೆ.
ಕೂದಲಿಗೆ ಕಂಡಿಷನರ್
ಕೂದಲ ರಕ್ಷಣೆಗಾಗಿ ನೈಸರ್ಗಿಕ ಕಂಡಿಷನರ್ ಆಗಿ ಬಳಸಿದ ಚಹಾ ಪುಡಿಯನ್ನು ಬಳಸಬಹುದು. ಮೊದಲು ಬಳಸಿದ ಚಹಾ ಎಲೆಗಳನ್ನು ಶುದ್ಧ ನೀರಿನಲ್ಲಿ ಕುದಿಸಿ. ನಂತರ ಆ ನೀರನ್ನು ಫಿಲ್ಟರ್ ಮಾಡಿ, ಚಹಾ ಪುಡಿಯನ್ನು ಬೇರ್ಪಡಿಸಿ. ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಸ್ನಾನ ಮಾಡಿ. ಕೂದಲಿಗೆ ಹೊಳಪು ಬರುತ್ತದೆ.