ಚಿಕ್ಕ ಮಕ್ಕಳಿಗೆ ಚಹಾ ಮತ್ತು ಕಾಫಿ ಕುಡಿಯೋ ಆಸೆ. ಚಹಾ ಕಾಫಿ ಕೇಳಿದಾಗಲೆಲ್ಲ ಪೋಷಕರು ಅದನ್ನು ಕುಡಿದರೆ ಕಪ್ಪಗಾಗಿಬಿಡುತ್ತೀರಾ ಎಂದು ನಮ್ಮನ್ನು ಹೆದರಿಸುತ್ತಿದ್ದರು. ಈ ಭಯದಿಂದಾಗಿ ಅನೇಕ ಮಕ್ಕಳು ಚಹಾ ಕುಡಿಯುವುದಿಲ್ಲ. ಕಪ್ಪು ಚರ್ಮವನ್ನು ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಎಲ್ಲರಿಗೂ ಮೈಬಣ್ಣ ಬೆಳ್ಳಗಿರಬೇಕೆಂಬ ಆಸೆ ಸಹಜ. ಚಹಾ ಸೇವನೆ ಮತ್ತು ಚರ್ಮದ ಬಣ್ಣಕ್ಕೆ ಯಾವುದೇ ಸಂಬಂಧವಿದೆಯೇ ಎಂಬುದು ಇಂಟ್ರೆಸ್ಟಿಂಗ್ ಸಂಗತಿ.
ಭಾರತದಲ್ಲಿ ನೀರು ಬಿಟ್ಟರೆ ಅತ್ಯಂತ ಜನಪ್ರಿಯ ಪಾನೀಯ ಚಹಾ. ಜನರು ಬೆಳಗ್ಗೆ ಎದ್ದ ತಕ್ಷಣ, ಸಂಜೆಯ ಬಿಡುವಿನ ಸಮಯದಲ್ಲಿ ಚಹಾಕ್ಕಾಗಿ ಹಂಬಲಿಸುತ್ತಾರೆ. ಚಹಾ ಕುಡಿಯುವುದರಿಂದ ಹೊಟ್ಟೆನೋವು, ನಿದ್ರಾಹೀನತೆ ಮತ್ತು ಮಧುಮೇಹ ಸೇರಿದಂತೆ ಅನೇಕ ಅನಾನುಕೂಲತೆಗಳಿವೆ ಅನ್ನೋದು ಕೂಡ ಬಹುತೇಕರಿಗೆ ತಿಳಿದಿಲ್ಲ. ಬಾಲ್ಯದಲ್ಲಿ ಚಹಾ ಕುಡಿಯಬಾರದು ಎಂದು ಹೇಳಲಾಗುತ್ತದೆ, ಏಕೆಂದರೆ ಅದರಲ್ಲಿ ಕೆಫೀನ್ ಇದೆ. ಇದು ಚಿಕ್ಕ ಮಕ್ಕಳಿಗೆ ಹಾನಿಕಾರಕ. ಆದರೆ ಅದೇ ಮಕ್ಕಳು ಬೆಳೆದ ನಂತರವೂ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳದೇ ಇರುವುದು ಉತ್ತಮ.
ಆದರೆ ಅನಗತ್ಯವಾಗಿ ಜೀವನ ಪರ್ಯಂತ ವದಂತಿಯನ್ನು ಸಾಗಿಸುವುದು ಸರಿಯಲ್ಲ. ಚಹಾ ಸೇವನೆಯಿಂದ ಚರ್ಮದ ಬಣ್ಣವು ಕಪ್ಪಾಗುತ್ತದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಕಂಡುಬಂದಿಲ್ಲ. ತಜ್ಞರ ಪ್ರಕಾರ ಚರ್ಮದ ಬಣ್ಣವು ನಿಮ್ಮ ತಳಿಶಾಸ್ತ್ರ, ಜೀವನಶೈಲಿ, ಹೊರಾಂಗಣ ಚಟುವಟಿಕೆಗಳು ಮತ್ತು ಚರ್ಮದಲ್ಲಿ ಮೆಲನಿನ್ ಇರುವಿಕೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಚಹಾದಿಂದ ಚರ್ಮ ಕಪ್ಪಾಗುತ್ತದೆ ಎಂಬುದು ಕೇವಲ ವದಂತಿ.