ಚಳಿಗಾಲ ಈಗಾಗಲೇ ಶುರುವಾಗಿದೆ. ಚಳಿಗಾಲದಲ್ಲಿ ಹೆಚ್ಚಾಗಿ ಒಣಚರ್ಮ, ಕೂದಲಿನ ಸಮಸ್ಯೆ ಮತ್ತು ಕೈ ಕಾಲು ನೋವುಗಳ ಸಮಸ್ಯೆ ಕಾಡುತ್ತದೆ. ಔಷಧಿ ಮಾತ್ರೆಗಳ ಪರಿಣಾಮ ಅಲ್ಪಾವಧಿ. ಇವುಗಳಿಗೆ ಮನೆಯಲ್ಲಿಯೇ ಮದ್ದಿದೆ.
ಔಷಧೀಯ ಗುಣ ಹೊಂದಿರುವ ಸಾಸಿವೆ ಎಣ್ಣೆ ಅಡುಗೆಗೆ ಮಾತ್ರ ಬಳಕೆಯಾಗುವುದಿಲ್ಲ. ದೇಹದ ನೋವುಗಳನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಚಳಿಗಾಲದಲ್ಲಿ ಕೈ ಕಾಲುಗಳ ನೋವನ್ನು ನಿವಾರಿಸುತ್ತದೆ.
ಸಾಸಿವೆ ಎಣ್ಣೆಯಲ್ಲಿ ಉಪ್ಪು, ಕಾಳುಮೆಣಸು ಸೇರಿಸಿ ಸ್ವಲ್ಪ ಬಿಸಿ ಮಾಡಿ. ತಯಾರಾದ ಮಿಶ್ರಣವನ್ನು ಬೆಚ್ಚಗಿರುವಾಗಲೇ ಕೈ ಕಾಲುಗಳಿಗೆ ಹಚ್ಚಿ ನಾಲ್ಕೈದು ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ.
ಈರುಳ್ಳಿ ನಮ್ಮ ಆರೋಗ್ಯಕ್ಕಷ್ಟೆ ಅಲ್ಲದೆ ಚರ್ಮಕ್ಕೆ ಮತ್ತು ಕೂದಲಿಗೆ ಪ್ರಯೋಜನಕಾರಿ. ಇದರಲ್ಲಿರುವ ರೋಗ ನಿರೋಧಕ ಅಂಶ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರ ರಸವನ್ನು ಬಳಸುವುದರಿಂದ ಕೈ ಮತ್ತು ಕಾಲುಗಳ ತುರಿಕೆ ಮತ್ತು ನೋವಿಗೆ ಪರಿಹಾರ ಸಿಗುತ್ತದೆ.
ನಿಂಬೆ ರಸವನ್ನು ಕೈಕಾಲುಗಳ ಬಾವು ಇರುವ ಜಾಗಕ್ಕೆ ಹಚ್ಚಿದರೆ ಬಾವು ಕಡಿಮೆಯಾಗುತ್ತದೆ.
ಆಲಿವ್ ಆಯಿಲ್ ಗೆ ಅರಿಶಿನವನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ಹಚ್ಚುವುದ್ರಿಂದ ನೋವು ನಿವಾರಣೆಯಾಗುತ್ತದೆ.
ಒಂದು ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಊದಿರುವ ಜಾಗಕ್ಕೆ ನಿಧಾನವಾಗಿ ಉಜ್ಜುವುದರಿಂದ ಉರಿಯೂತ ಕಡಿಮೆಯಾಗುತ್ತದೆ.