ಸದಾಕಾಲ ಆರೋಗ್ಯವಾಗಿರಬೇಕು ಅನ್ನೋದು ಎಲ್ಲರ ಉದ್ದೇಶ. ಇದಕ್ಕಾಗಿ ನಾವು ಸಾಕಷ್ಟು ಸರ್ಕಸ್ ಮಾಡುತ್ತೇವೆ. ಚಳಿಗಾಲದಲ್ಲಂತೂ ಆರೋಗ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅವಶ್ಯಕ. ದೇಹಕ್ಕೆ ಅಗತ್ಯವಿರುವ ಯಾವುದೇ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ಕೆಲಸವನ್ನು ಅನಾನಸ್ ಜ್ಯೂಸ್ ಮಾಡುತ್ತದೆ. ನಮ್ಮ ರೋಗನಿರೋಧಕ ಶಕ್ತಿ ಬಲಪಡಿಸಲು ಮತ್ತು ಜೀರ್ಣಕ್ರಿಯೆಗೆ ಇದು ರಾಮಬಾಣಕ್ಕಿಂತ ಕಡಿಮೆಯಿಲ್ಲ.
ಅನಾನಸ್ ಬ್ರೋಮೆಲಿನ್‌ನ ಏಕೈಕ ಆಹಾರ ಮೂಲವಾಗಿದೆ. ಚಳಿಗಾಲದಲ್ಲಿ ಕಾಡುವ ಅನೇಕ ರೋಗಗಳ ಚಿಕಿತ್ಸೆಗಾಗಿ ಈ ಕಿಣ್ವವನ್ನು ಬಳಸಲಾಗುತ್ತದೆ. ಅನಾನಸ್‌ನಲ್ಲಿ ಕಬ್ಬಿಣ, ವಿಟಮಿನ್ ಸಿ, ಮ್ಯಾಂಗನೀಸ್, ತಾಮ್ರ, ಫೋಲೇಟ್, ಪೊಟ್ಯಾಸಿಯಮ್, ವಿಟಮಿನ್ ಕೆ, ವಿಟಮಿನ್ ಬಿ 6, ವಿಟಮಿನ್ ಬಿ 1 (ಥಯಾಮಿನ್), ಕ್ಯಾಲ್ಸಿಯಂ, ರಂಜಕ, ಕೋಲೀನ್, ಮೆಗ್ನೀಸಿಯಮ್ ಹೇರಳವಾಗಿದೆ.
ಮೊಡವೆಗೆ ಮದ್ದು: ಅನಾನಸ್ ಜ್ಯೂಸ್ ಮೊಡವೆಯನ್ನು ಹೋಗಲಾಡಿಸುತ್ತದೆ. ಚರ್ಮಕ್ಕೆ ಹೊಳಪು ಸಹ ನೀಡುತ್ತದೆ. ವಯಸ್ಸು ಹೆಚ್ಚಾದಂತೆ ತ್ವಚೆಯ ಹೊಳಪು ಕಡಿಮೆಯಾಗುತ್ತದೆ ಮತ್ತು ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ನೀವು ನಿಯಮಿತವಾಗಿ ಅನಾನಸ್ ಜ್ಯೂಸ್ ಕುಡಿಯುತ್ತಿದ್ದರೆ, ಅದು ನಿಮ್ಮ ತ್ವಚೆಯನ್ನು ನಯವಾಗಿಸುವುದು ಮಾತ್ರವಲ್ಲದೆ ನೀವು ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ.
ಹೊಟ್ಟೆ ನೋವು ನಿವಾರಣೆ: ಅನೇಕ ಬಾರಿ ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದರಿಂದ ಸಮಸ್ಯೆಯಾಗುತ್ತದೆ. ಹೊಟ್ಟೆ ಉಬ್ಬರಿಸುವುದು, ಅಜೀರ್ಣ ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಅನಾನಸ್ ಜ್ಯೂಸ್ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಅನಾನಸ್‌ನಲ್ಲಿರುವ ಬ್ರೋಮೆಲಿನ್ ಜೀರ್ಣಕಾರಿ ಫೈಬರ್ ಮತ್ತು ವಿಟಮಿನ್ ಸಿಯ ಸಮೃದ್ಧ ಮೂಲವಾಗಿದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಅನಾನಸ್ ಜ್ಯೂಸ್ ಕುಡಿಯುತ್ತಿದ್ದರೆ ಮಲಬದ್ಧತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರಿಸುವುದು ಕಡಿಮೆಯಾಗುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆ: ದಿನನಿತ್ಯ ಅನಾನಸ್ ಜ್ಯೂಸ್ ಕುಡಿಯುವವರಿಂದ ಬಹಳಷ್ಟು ರೋಗಗಳಿಂದ ದೂರವಿರಬಹುದು. ಯಾಕಂದ್ರೆ ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆಗಾಗ್ಗೆ ಶೀತ, ಕೆಮ್ಮಿನಿಂದ ಬಳಲುವವರು ಅನಾನಸ್ ರಸವನ್ನು ಸೇವಿಸಬೇಕು. ಇದರಲ್ಲಿರುವ ಬ್ರೋಮೆಲಿನ್ ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.