ಬೆಳ್ಳುಳ್ಳಿಯಲ್ಲಿರೋ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿವೆ. ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ಚಳಿಗಾಲದಲ್ಲಂತೂ ಬೆಳ್ಳುಳ್ಳಿಯನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ. ಶೀತ, ಕೆಮ್ಮು, ಕೊಲೆಸ್ಟ್ರಾಲ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ರೋಗಗಳನ್ನು ಬೆಳ್ಳುಳ್ಳಿ ದೂರವಿಡುತ್ತದೆ. ಬೆಳ್ಳುಳ್ಳಿ ನಮ್ಮ ದೇಹದಲ್ಲಿ ಉಷ್ಣವನ್ನುಂಟು ಮಾಡಬಲ್ಲದು. ಆದ್ದರಿಂದ ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಬಳಸಬೇಕು.
ಶೀತಕ್ಕೆ ಮದ್ದು : ಬೆಳ್ಳುಳ್ಳಿಯ ಸೇವನೆಯು ಶೀತ ಮತ್ತು ಜ್ವರದ ಸಮಸ್ಯೆಯನ್ನು ದೂರವಿಡುತ್ತದೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಸ್ ಗುಣವಿದ್ದು ಶೀತ ಮತ್ತು ಜ್ವರದಂತಹ ರೋಗಗಳನ್ನು ಇದು ತಡೆಯಬಲ್ಲದು. ಬೆಳ್ಳುಳ್ಳಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ ಮತ್ತು ಜ್ವರಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ಹೃದಯಕ್ಕೆ ಪ್ರಯೋಜನಕಾರಿ: ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚು. ಏಕೆಂದರೆ ಈ ಸೀಸನ್ನಲ್ಲಿ ಹೆಚ್ಚು ಕರಿದ ಆಹಾರವನ್ನು ಸೇವಿಸಲಾಗುತ್ತದೆ. ದೈಹಿಕ ಚಟುವಟಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಆ್ಯಂಟಿಒಕ್ಸಿಡೆಂಟ್ಗಳಿದ್ದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡುವುದಿಲ್ಲ. ಬೆಳ್ಳುಳ್ಳಿಯಲ್ಲಿರುವ ಖನಿಜಗಳು ರಕ್ತದೊತ್ತಡವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ.
ಮೂಳೆಗಳನ್ನು ಬಲಪಡಿಸುತ್ತದೆ: ವಯಸ್ಸು ಐವತ್ತಾಗುತ್ತಿದ್ದಂತೆ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ ಇದೆ, ಇದು ಮೂಳೆಗಳನ್ನು ಬಲಪಡಿಸಲು ಉಪಯುಕ್ತವಾಗಿದೆ. ಬೆಳ್ಳುಳ್ಳಿಯಲ್ಲಿ ಉರಿಯೂತ ನಿವಾರಕ ಗುಣಗಳಿವೆ. ನೋವಿನ ಸಮಸ್ಯೆಯನ್ನೂ ಬೆಳ್ಳುಳ್ಳಿ ದೂರ ಮಾಡಬಲ್ಲದು.
ಜ್ಞಾಪಕಶಕ್ತಿ ಹೆಚ್ಚಳ: ಬೆಳ್ಳುಳ್ಳಿಯಲ್ಲಿರುವ ಎಂಟಿಒಕ್ಸಿಡೆಂಟ್ಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ. ಬೆಳ್ಳುಳ್ಳಿಯ ಸೇವನೆಯು ಜ್ಞಾಪಕಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಆಲ್ಝೈಮರ್ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ದೇಹಕ್ಕೆ ಚುರುಕುತನ: ಚಳಿಗಾಲದಲ್ಲಿ ಮಲಗೇ ಇರಬೇಕೆಂದು ಅನಿಸುತ್ತದೆ. ಮೂಳೆಗಳು ಮತ್ತು ಸ್ನಾಯುಗಳು ಗಟ್ಟಿಯಾಗುತ್ತವೆ. ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ. ಇದರ ಬಳಕೆಯಿಂದ ಸುಸ್ತು ಮತ್ತು ದೌರ್ಬಲ್ಯವೂ ದೂರವಾಗುತ್ತದೆ.