ಕೊರೆಯುವ ಚಳಿಗೆ ಆಗಾಗ ಕಾಫಿ ಅಥವಾ ಟೀ ಹೀರಬೇಕು ಅನ್ನಿಸೋದು ಸಹಜ. ಕಾಫಿ ಅಥವಾ ಟೀ ಜೊತೆಗೆ ಬಿಸಿಬಿಸಿ ಬೋಂಡಾ ಇದ್ದರೆ ಆಹಾ ಎಂಬ ಉದ್ಘಾರ ತಂತಾನೇ ಬರತ್ತೆ ಅಲ್ವೇ?
ಸೊಪ್ಪನ್ನು ಬಳಸಿ ಬೋಂಡಾ ಮಾಡಿ ದೇಹಕ್ಕೂ ಹಿತ, ನಾಲಿಗೆಗೂ ರುಚಿ ಎನಿಸುವ ಈ ರೆಸಿಪಿ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು
ಕಡಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು -1/2 ಕಪ್
ಸಬ್ಬಸಿಗೆ ಸೊಪ್ಪು – ಸ್ವಲ್ಪ
ಮೆಂತ್ಯೆ ಸೊಪ್ಪು- ಸ್ವಲ್ಪ
ಪುದೀನಾ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಬಟ್ಟಲು
ಹಸಿ ಮೆಣಸಿನ ಕಾಯಿ ಪೇಸ್ಟ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ಸ್ವಲ್ಪ
ಎಣ್ಣೆ – ಕರಿಯಲು.
ತಯಾರಿಸುವ ವಿಧಾನ
ಕಡಲೆಹಿಟ್ಟು ಹಾಗೂ ಅಕ್ಕಿ ಹಿಟ್ಟು, ಅರಿಶಿನ, ಉಪ್ಪು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಬಳಸಿ ಕಲಿಸಿಕೊಳ್ಳಿ.
ಇದಕ್ಕೆ ಹೆಚ್ಚಿದ ಎಲ್ಲಾ ಸೊಪ್ಪುಗಳು, ಹಸಿಮೆಣಸಿನ ಕಾಯಿ ಪೇಸ್ಟ್, ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಂದ ಉರಿಯಲ್ಲಿ ಹದವಾಗಿ ಬೋಂಡಾ ಕರಿಯರಿ. ಟೀ ಅಥವಾ ಕಾಫಿಯೊಂದಿಗೆ ಸೇವಿಸಿ.