ಸೂರತ್: ಚಲಿಸುತ್ತಿರುವ ರೈಲು ಹಾಗೂ ಪ್ಲಾಟ್ಫಾರ್ಮ್ ನಡುವೆ ಪ್ರಯಾಣಿಕರೊಬ್ಬರು ಬಿದ್ದಿರುವ ಆಘಾತಕಾರಿ ಘಟನೆ ಗುಜರಾತ್ನ ಸೂರತ್ ರೈಲು ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕ ಗಾಯಗೊಳ್ಳದೆ ಪಾರಾಗಿದ್ದಾನೆ.
ಪ್ರಯಾಣಿಕರೊಬ್ಬರು ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಪ್ಲಾಟ್ಫಾರ್ಮ್ ಗೆ ಜಾರಿಬೀಳುತ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಫೆಬ್ರವರಿ 28 ರಂದು ಬೆಳಿಗ್ಗೆ 8:38ಕ್ಕೆ ಈ ಘಟನೆ ಸಂಭವಿಸಿದೆ. ವ್ಯಕ್ತಿ ಬಿದ್ದಾಕ್ಷಣ ರೈಲು ಸ್ಥಗಿತಗೊಂಡಿದ್ದು, ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಆತನ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಪ್ರಾಣಾಪಾಯದಿಂದ ಆತ ಪಾರಾಗಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಬಳಕೆದಾರರು ಅಸಡ್ಡೆ ತೋರುವ ಪ್ರಯಾಣಿಕರಿಗೆ ದಂಡ ವಿಧಿಸುವಂತೆ ಕೋರಿದ್ದರೆ, ಇನ್ನೂ ಕೆಲವರು ರೈಲುಗಳಲ್ಲಿ ಘೋಷಣೆಗಳನ್ನು ಪರಿಚಯಿಸಲು ಸಲಹೆ ನೀಡಿದ್ದಾರೆ. ಇತರರು ವ್ಯಕ್ತಿಯ ಜೀವ ಕಾಪಾಡಿದ್ದಕ್ಕಾಗಿ ರೈಲ್ವೆ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.