ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕುರಿತಂತೆ ನೀಡಿದ ಹೇಳಿಕೆ ಈಗ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಮೂಲಕ ಕುಮಾರಸ್ವಾಮಿ ಅವರು ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಕೂಗು ಕೇಳಿ ಬರುತ್ತಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರು ಸಹ ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಆದರೆ ಅವರು ಹೊರಡಿಸಿದ ಪ್ರಕಟಣೆಯೇ ಈಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಅಶೋಕ್ ಹಾರನಹಳ್ಳಿಯವರು ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯನ್ನು ದಾರಿ ತಪ್ಪಿದ ದೇಶಭಕ್ತ ಎಂದು ಹೇಳಿರುವುದು ಬಹಳಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆದಿದ್ದು, ತಮ್ಮ ಹೇಳಿಕೆ ಕುರಿತಂತೆ ಅಶೋಕ್ ಹಾರನಹಳ್ಳಿ ಕ್ಷಮೆ ಕೇಳುವಂತೆ ಒತ್ತಾಯ ಕೇಳಿ ಬರುತ್ತಿದೆ. ನಾಥುರಾಮ್ ಗೋಡ್ಸೆ ದಾರಿ ತಪ್ಪಿದ ದೇಶಭಕ್ತ ಆದರೆ ಮಹಾತ್ಮ ಗಾಂಧಿ ಯಾರು ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.