ರಾಯಚೂರು : ವ್ಯಕ್ತಿಯೊಬ್ಬ ಇರುವ ಚಟಗಳಿಗೆಲ್ಲ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡು ಕೊನೆಗೆ ಮನೆಯನ್ನೇ ಮಾರಲು ಮುಂದಾಗಿದ್ದ. ಮಗನ ವರ್ತನೆಗೆ ಬೇಸತ್ತ ತಾಯಿ ಹಾಗೂ ಸಂಬಂಧಿಕರು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸಿರವಾರದಲ್ಲಿ ನಡೆದಿದ್ದು, ಅಮರೇಶ್(43) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಇಸ್ಪೀಟ್ ಸೇರಿದಂತೆ ಮದ್ಯದ ವ್ಯಸನಿಯಾಗಿದ್ದ ಎನ್ನಲಾಗಿದೆ. ಹೀಗಾಗಿ ಕಂಡ ಕಂಡವರಲ್ಲಿ ಸಾಕಷ್ಟು ಸಾಲ ಮಾಡಿದ್ದ. ಸಾಲ ತೀರಿಸಲು ಆಗದೆ ಕೊನೆಗೆ ಮನೆಯನ್ನೇ ಮಾರಾಟಕ್ಕೆ ಇಟ್ಟಿದ್ದ ಎನ್ನಲಾಗಿದೆ.
ಈ ವಿಷಯವಾಗಿ ಮನೆಯಲ್ಲಿ ಈತನೊಂದಿಗೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ತಾಯಿ, ಆತನ ಸಹೋದರಿ ಹಾಗೂ ಭಾವ ಸೇರಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಮದ್ಯ ವ್ಯಸನದ ಜೊತೆ ಇಸ್ಪೀಟ್ ಶೋಕಿಗೆ ಬಿದ್ದು, ಸಾಲ ತೀರಿಸಲು ಮನೆ ಮಾರಾಟಕ್ಕೆ ಯತ್ನಿಸಿದ್ದ ಹಿನ್ನೆಲೆ ಮನೆಯವರೊಂದಿಗೆ ಜಗಳ ನಡೆದಿದೆ. ತಾಯಿ, ಅಕ್ಕ, ಭಾವ ಸೇರಿಕೊಂಡು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಗ್ಗದಿಂದ ಆತನ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಅಲ್ಲದೇ, ಆತನ ತಲೆಗೆ ಕೊಡಲಿಯಿಂದ ಕೂಡ ಹೊಡೆಯಲಾಗಿದ್ದು, ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮರೇಶ್ ನಿಗೆ ಮದುವೆ ಕೂಡ ಆಗಿತ್ತು. ಆದರೆ, ಈ ವ್ಯಕ್ತಿ ಕೆಲಸ ಮಾಡದೆ, ಬರೀ ಕುಡಿಯುತ್ತ ತಿರುಗುವುದನ್ನು ಕಂಡು ಬೇಸರಗೊಂಡ ಪತ್ನಿ ಸೌಭಾಗ್ಯ ತವರು ಮನೆ ಸೇರಿದ್ದರು. ಈ ವ್ಯಕ್ತಿ ಮಾತ್ರ ಯಾವ ಪರಿವೇ ಇಲ್ಲದೆ ಚಟದ ದಾಸನಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಕೊನೆಗೆ ಮನೆ ಮಾರಲು ಕೂಡ ಮುಂದಾಗಿದ್ದ. ಈ ವಿಷಯವಾಗಿಯೇ ಮನೆಯಲ್ಲಿ ಜಗಳ ಆರಂಭವಾಗಿದೆ. ಕೊಲೆ ಮಾಡಿದ ನಂತರ ಮೃತ ದೇಹವನ್ನು ಮನೆಯಿಂದ ಹೊರಗೆ ಬಿಸಾಡಿದ್ದು, ಸ್ಥಳೀಯರ ಮಾಹಿತಿಯ ಮೇಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ಈ ಕುರಿತು ಅಮರೇಶ್ ಹೆಂಡತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಭಾವ ಸಂತೋಷ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.