ಬೆಂಗಳೂರು: ಬೆಂಗಳೂರಿನಲ್ಲಿ ಯಾವಾಗ ಬಿಸಿಲು ಇರುತ್ತೋ ಇನ್ಯಾವಾಗ ಮೋಡ ಕವಿದ ವಾತಾವರಣ ಇರುತ್ತೋ ಗೊತ್ತೇ ಆಗಲ್ಲ. ಕಳೆದೊಂದು ವಾರದಿಂದ ಏನು ಬಿಸಿಲಪ್ಪ ಅಂತಿದ್ದ ಜನರಿಗೆ ಇದೀಗ ಬೆಂಗಳೂರು ಕೂಲ್ ಕೂಲ್ ಅನಿಸುತ್ತಿದೆ. ಇದಕ್ಕೆ ಕಾರಣ ಚಂಡಮಾರುತ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ಉಂಟಾಗಿದ್ದು ಇದರ ಪರಿಣಾಮ ನಮ್ಮ ರಾಜ್ಯದ ಕೆಲವು ಭಾಗದಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣ ಇರಲಿದೆ. ಇಂದಿನಿಂದ ಡಿಸೆಂಬರ್ 13 ರವರೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇನ್ನು ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆಯಂತೆ. ಗಂಟೆಗೆ 67-75 ಕಿಮೀ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 11 ಹಾಗೂ 12 ರಂದು ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.