ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ತನ್ನ ಪೇಮೆಂಟ್ ಪ್ಲಾಟ್ ಫಾರ್ಮ್ ಗೆ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾರತದ ಬಳಕೆದಾರರಿಗೆ ಒಟ್ಟು 105 ರೂಪಾಯಿಗಳ ಕ್ಯಾಶ್ ಬ್ಯಾಕ್ ನೀಡುವುದಾಗಿ ಘೋಷಣೆ ಮಾಡಿದೆ.
ಭಾರತದ ಹೆಚ್ಚಿನ ಗ್ರಾಹಕರು ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಅನ್ನು ಬಳಸಿ ಪೇಮೆಂಟ್ ಮಾಡುತ್ತಾರೆ. ಇಂತಹ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲೆಂದು ವಾಟ್ಸಾಪ್ ಮೂಲಕ ಪೇಮೆಂಟ್ ಮಾಡುವವರಿಗೆ ಮುಂದಿನ ಪೇಮೆಂಟ್ ಸಮಯದಲ್ಲಿ ಒಟ್ಟು 105 ರೂಪಾಯಿಗಳ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ನೀಡಲಿದೆ. ಅಂದರೆ, ಒಂದು ಬಾರಿ ಪೇಮೆಂಟ್ ಮಾಡಿದ ನಂತರದ ಮೂರು ಪೇಮೆಂಟ್ ಗಳ ಅವಧಿಯಲ್ಲಿ ತಲಾ 35 ರೂಪಾಯಿಗಳಂತೆ ಒಟ್ಟು 105 ರೂಪಾಯಿಗಳ ಕ್ಯಾಶ್ ಬ್ಯಾಕ್ ಅನ್ನು ನೀಡಲಿದೆ.
ವಿಶೇಷವೆಂದರೆ, ಈ ಕ್ಯಾಶ್ ಬ್ಯಾಕ್ ಪಡೆಯಲು ಇಂತಿಷ್ಟೇ ಹಣವನ್ನು ಪಾವತಿಸಬೇಕೆಂಬ ನಿಬಂಧನೆಯೇನೂ ಇಲ್ಲ. ಗ್ರಾಹಕ ವಾಟ್ಸಾಪ್ ಪೇಮೆಂಟ್ ಮೂಲಕ 1 ರೂಪಾಯಿ ಕಳುಹಿಸಿದರೂ ಈ ಕ್ಯಾಶ್ ಬ್ಯಾಕ್ ಲಭ್ಯವಿದೆ. ಆದರೆ, ಇದೊಂದು ಸೀಮಿತ ಅವಧಿಯ ಆಫರ್ ಆಗಿದ್ದು, ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.