ತೂಕ ಇಳಿಸಲು ಬಯಸುವವರಿಗೆ ಗ್ರೀನ್ ಟೀ ರಾಮಬಾಣವಿದ್ದಂತೆ. ಗ್ರೀನ್ ಟೀ ಕುಡಿಯುವುದರಿಂದ ತ್ವಚೆಗೂ ಹೊಳಪು ಬರುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಗ್ರೀನ್ ಟೀ ದೇಹಕ್ಕೆ ಶಕ್ತಿ ತುಂಬಬಲ್ಲದು. ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಕುಡಿಯುವವರ ಸಂಖ್ಯೆ ಜಗತ್ತಿನಲ್ಲಿ ಸಾಕಷ್ಟು ಹೆಚ್ಚಾಗಿದೆ. ಇದು ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದ್ರೋಗಕ್ಕೂ ಪ್ರಯೋಜನಕಾರಿಯಾಗಿದೆ.
ಆದರೆ ಕೆಲವರು ಗ್ರೀನ್ ಟೀ ಸೇವಿಸುವ ಸರಿಯಾದ ಮಾರ್ಗವನ್ನು ತಿಳಿದಿಲ್ಲ. ಅದನ್ನು ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ.ಗ್ರೀನ್ ಟೀ ಕುಡಿಯುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಪ್ರಯೋಜನಗಳನ್ನು ಪಡೆಯುವ ಬದಲು ನಷ್ಟವಾಗಬಹುದು. ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತವೆ.
ಸೇವನೆ ಮಿತವಾಗಿರಲಿ – ಗ್ರೀನ್ ಟೀಯನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಅಗತ್ಯವಿದ್ದಾಗ ಮಾತ್ರ ಗ್ರೀನ್ ಟೀ ಕುಡಿಯಿರಿ. ಅತಿಯಾಗಿ ಸೇವಿಸಿದರೆ ಅದು ಆತಂಕ, ನಿದ್ರಾಹೀನತೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಸರಿಯಾದ ಸಮಯದಲ್ಲಿ ಸೇವನೆ ಮಾಡಿ – ಗ್ರೀನ್ ಟೀಯಲ್ಲಿ ಕೆಫೀನ್ ಕೂಡ ಇದೆ. ರಾತ್ರಿ ಇದನ್ನು ಕುಡಿದರೆ ನಿದ್ದೆಗೆ ಸಮಸ್ಯೆಯಾಗಬಹುದು. ರಾತ್ರಿ ಗ್ರೀನ್ ಟೀ ಸೇವನೆ ಮಾಡಬೇಡಿ. ಮಲಗುವ ಮುನ್ನ ಅಪ್ಪಿತಪ್ಪಿಯೂ ಗ್ರೀನ್ ಟೀ ಸೇವಿಸಬಾರದು.
ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ– ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿರುತ್ತದೆ. ಅವರು ಗ್ರೀನ್ ಟೀ ಕುಡಿಯುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬಾರದು. ಗ್ರೀನ್ ಟೀ ಟ್ಯಾನಿನ್ ಅನ್ನು ಹೊಂದಿರುತ್ತದೆ, ಇದು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಅದಕ್ಕಾಗಿಯೇ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.
ಊಟವಾದ ತಕ್ಷಣ ಕುಡಿಯಬೇಡಿ – ಆಹಾರ ಸೇವಿಸಿದ ತಕ್ಷಣ ಗ್ರೀನ್ ಟೀ ಕುಡಿಯುತ್ತಿದ್ರೆ ಅದನ್ನು ತಪ್ಪಿಸಿ. ಏಕೆಂದರೆ ಇದು ಆಹಾರದಿಂದ ಪೋಷಕಾಂಶಗಳನ್ನು ಪಡೆಯುವಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಊಟವಾದ ತಕ್ಷಣ ಇದರ ಸೇವನೆಯು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ಆಹಾರವನ್ನು ಸೇವಿಸಿದ 1-2 ಗಂಟೆಗಳ ನಂತರ ಗ್ರೀನ್ ಟೀಯನ್ನು ಆರಾಮವಾಗಿ ಕುಡಿಯಬಹುದು.
ಗ್ರೀನ್ ಟೀ ಬ್ಯಾಗ್‌ಗಳನ್ನು ಮರುಬಳಕೆ ಮಾಡಬೇಡಿ– ಕೆಲವರು ಗ್ರೀನ್ ಟೀ ಬ್ಯಾಗ್‌ಗಳನ್ನು ಮರುಬಳಕೆ ಮಾಡುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಚಹಾದ ರುಚಿ ಹಾಳಾಗುತ್ತದೆ. ಜೊತೆಗೆ ಅದರ ಪ್ರಯೋಜನಗಳೂ ದೊರೆಯುವುದಿಲ್ಲ. ಹಾಗಾಗಿ ಗ್ರೀನ್ ಟೀ ತಾಜಾ ಎಲೆಗಳನ್ನು ಮಾತ್ರ ಬಳಸಿ.