ಗ್ರಾಹಕನ ಖಾತೆಯಲ್ಲಿ ಹಣವಿದ್ದರೂ ಸಹ ಆತ ನೀಡಿದ ಚೆಕ್ ಬೌನ್ಸ್ ಮಾಡಿದ್ದಲ್ಲದೆ, ಹಣವಿಲ್ಲದೆ ಚೆಕ್ ನೀಡಿದ್ದಾರೆಂದು ದಂಡವನ್ನೂ ವಿಧಿಸಿದ್ದ ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಇಂಥದೊಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಪ್ರಕರಣದ ವಿವರ: ದಾವಣಗೆರೆ ಸುಬ್ರಹ್ಮಣ್ಯ ನಗರದ ಮಂಜುನಾಥ್ ಎಂಬವರು ಡಿಸಿಬಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು, 2020ರ ಸೆಪ್ಟೆಂಬರ್ 30ರಂದು ಇಂಡಸ್ ಇಂಡ್ ಬ್ಯಾಂಕಿಗೆ 11,220 ರೂಪಾಯಿಗಳಿಗೆ ಚೆಕ್ ನೀಡಿದ್ದರು.
ಈ ಚೆಕ್ ಕಲೆಕ್ಷನ್ ಗಾಗಿ ಡಿಸಿಬಿ ಬ್ಯಾಂಕಿಗೆ ಬಂದ ವೇಳೆ ಮಂಜುನಾಥ್ ಅವರ ಖಾತೆಯಲ್ಲಿ ಈ ಚೆಕ್ ಗೆ ಪೂರಕವಾಗಿ ಹಣವಿದ್ದರೂ ಸಹ ಚೆಕ್ ಬೌನ್ಸ್ ಮಾಡಲಾಗಿತ್ತು. ಅಲ್ಲದೆ ಅವರಿಗೆ 1,390 ರೂಪಾಯಿಗಳ ಶುಲ್ಕವನ್ನು ಸಹ ವಿಧಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದ ಮಂಜುನಾಥ್, ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿರುವುದಕ್ಕೆ 2 ಲಕ್ಷ ರೂಪಾಯಿ ದಂಡ ವಿಧಿಸಲು ಮನವಿ ಮಾಡಿದ್ದರಲ್ಲದೆ, ಸೇವೆಯ ಕೊರತೆಗಾಗಿ 50,000 ರೂ. ನೀಡುವಂತೆ ಮನವಿ ಮಾಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಅರ್ಜಿದಾರರಿಗೆ ಆದ ಮಾನಸಿಕ ನೋವಿಗಾಗಿ 5,000 ರೂಪಾಯಿ ದಂಡ ಹಾಗೂ ಪ್ರಕರಣದ ಶುಲ್ಕ 5,000 ರೂಪಾಯಿಗಳನ್ನು ನೀಡುವಂತೆ ಸೂಚಿಸಿದೆ. ಹಣ ಪಾವತಿಯಲ್ಲಿ ವಿಳಂಬವಾದರೆ ಅದಕ್ಕೆ ಬಡ್ಡಿಯನ್ನು ನೀಡಲು ಸಹ ತಿಳಿಸಿದೆ.