ಡಿಗ್ರಿ ಮಗಿದ ಮೇಲೂ ಕೆಲಸ ಸಿಗದಿದ್ದಾಗ ನಿರಾಶೆಯಾಗುವುದು ಸಹಜ. ಬಿಹಾರ್ ನ ಪ್ರಿಯಾಂಕಾ ಗುಪ್ತಾಗೂ ಇದೇ ಅನುಭವ ಆಗಿತ್ತು. ಹಾಗಂತ ಆಕೆ ಛಲ ಬಿಟ್ಟಿರಲಿಲ್ಲ. ಆಕೆ “ಗ್ರಾಜುಯೆಟ್ ಚಾಯಿವಾಲಿ “ಅನ್ನೊ ಹೆಸರಿನಿಂದ ಚಹಾ ವ್ಯಾಪಾರಕ್ಕೆ ಮುಂದಾದಳು. ಕೆಲ ದಿನಗಳ ಮಟ್ಟಿಗೆ ಈಕೆ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಶ್ಲಾಷಿಸಿದರು. ಆದರೆ ಈಗ ಅದೆ ಪ್ರಿಯಾಂಕಾ ಅಂಗಡಿಯನ್ನ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಘಟನೆಯಿಂದ ನೊಂದಿರುವ ಪ್ರಿಯಾಂಕಾ ವಿಡಿಯೋ ಒಂದನ್ನ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ.
“ಇಲ್ಲಿ ಹೆಣ್ಣು ಎಂದರೆ ಅಡುಗೆ ಮನೆಯಲ್ಲಿ ಇರಲು ಲಾಯಕ್ಕು ಅಷ್ಟೆ. ಹೆಣ್ಣಿಗೆ ಕನಸು ಕಾಣುವ ಯಾವುದೇ ಹಕ್ಕಿಲ್ಲ. ಬಿಹಾರದ ಪಾಟ್ನಾದಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಅನೇಕ ಕಾನೂನು ಬಾಹಿರ ಕೆಲಸಗಳು ನಡೆಯುತ್ತೆ. ಅದು ಸರ್ಕಾರದ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಹೆಣ್ಣೊಬ್ಬಳು ವ್ಯಾಪಾರ ಮಾಡಲು ಮುಂದೆ ಬಂದರೆ ಸಾಕು, ಅದು ಅವರ ದೃಷ್ಟಿಯಲ್ಲಿ ಅಪರಾಧ. ಆಗ ಒಂದಲ್ಲ ಒಂದು ಕಾರಣ ಮುಂದಿಟ್ಟು ಕಿರಿಕಿರಿ ಕೊಡುತ್ತಾರೆ. ನಾನು ನನ್ನ ಇತಿಮಿತಿಗಳನ್ನ ಮರೆತಿದ್ದೆ. ನನ್ನ ಜೀವನವು ಅಡುಗೆ ಮನೆಗೆ, ನೆಲ ಗುಡಿಸೋದಕ್ಕೆ, ಮದುವೆಯಾಗೋಕೆ ಇದೆಯೇ ಹೊರತು ಮನೆಯಿಂದ ಹೊರಬಂದು ಸ್ವಂತ ವ್ಯವಹಾರ ಮಾಡೋದಕ್ಕೆ ಅಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅರ್ಥಶಾಸ್ತ್ರ ಪದವೀಧರೆಯಾಗಿದ್ದ ಪ್ರಿಯಾಂಕಾ ಗುಪ್ತಾ ಟೀ ಸ್ಟಾಲ್ ತೆರೆಯಲು ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು, ಇತರ ದಾಖಲೆ ಎಲ್ಲವನ್ನು ಹೊಂದಿದ್ದ ಪ್ರಿಯಾಂಕ `ಗ್ರಾಜುಯೆಟ್ ಚಾಯಿವಾಲಿ’ ಎಂದು ಹೆಸರಿಟ್ಟಿದ್ದರು. ಉತ್ತಮವಾಗಿ ವ್ಯಾಪಾರ ನಡೆಯುತ್ತಿದ್ದ ಟೀಸ್ಟಾಲ್ ಅನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವು ಮಾಡಿಬಿಟ್ಟಿದ್ದರು. ಇದರಿಂದ ಬೇಸತ್ತ ಪ್ರಿಯಾಂಕ ಸ್ಥಳೀಯ ರಾಜಕೀಯ ಮುಖಂಡರ ಬಳಿ ಮನವಿ ಮಾಡಿ ಟೀಸ್ಟಾಲನ್ನು ಮತ್ತೆ ಅದೇ ಜಾಗದಲ್ಲಿ ಇಟ್ಟಿದ್ದರು.
ಈಗ ಪುನಃ `ಗ್ರಾಜುವೇಟ್ ಚಾಯಿವಾಲಿ’ ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಅನ್ನುವ ಕಾರಣ ಕೊಟ್ಟಿದ್ದಾರೆ.
ಈಗ ಪ್ರಿಯಾಂಕಾ ಗುಪ್ತಾ ವಿಡಿಯೋ ವೈರಲ್ ಆಗಿದ್ದು, ಕೆಲವರು ಇದಕ್ಕೆ ಋಣಾತ್ಮಕ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ, ಧನ್ಯವಾದಗಳು, ನೀವು ಮಹಿಳೆಯಾಗಿದ್ದೀರಿ, ಮನೆಯಲ್ಲಿದ್ದೀರಿ, ಹೊರಗೆ ಏನನ್ನೂ ಮಾಡುವ ಅಗತ್ಯವಿಲ್ಲ ಏಕೆಂದರೆ ಅದು ಬಿಹಾರ ಎಂದು ಬಿಟ್ಟಿ ಸಲಹೆಯನ್ನ ಕೊಟ್ಟಿದ್ದಾರೆ.