ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ ಹಾಲು, ಸಾಂಬಾರು ಕುದಿಸುವಾಗ ಎಷ್ಟು ಎಚ್ಚರ ವಹಿಸಿದರೂ ಅದು ಚೆಲ್ಲುವುದುಂಟು, ಇಲ್ಲವೇ ಕುದಿಯುವಾಗ ಹಾರುವುದುಂಟು.
ಹೀಗಾಗಿ ಇದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಸವಾಲಿನ ಕೆಲಸವೇ. ಗ್ಯಾಸ್ ಸ್ಟವ್ ಬರ್ನ್ ರ್ ಗಳನ್ನು ಸ್ವಚ್ಛ ಮಾಡಲು ಅಮ್ಮೋನಿಯಂ ನೆರವಾಗುತ್ತದೆ. ಇದು ಫಾರ್ಮಸಿ ಅಂಗಡಿಗಳಲ್ಲಿ ಸಿಗುತ್ತದೆ.
ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪರಾಕ್ಸೈಡ್ ಅನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗ್ಯಾಸ್ ಸ್ಟೌವ್ ನಲ್ಲಿರುವ ಕಲೆಗಳ ಮೇಲೆ ಹಚ್ಚಿ. ಸ್ಪಲ್ಪ ಹೊತ್ತಿನ ಬಳಿಕ ತೊಳೆದರೆ ಕೊಳೆ ಮಾಯವಾಗುತ್ತದೆ.
ಮನೆಯಲ್ಲೇ ಇರುವ ಉಪ್ಪು ಮತ್ತು ಬೇಕಿಂಗ್ ಸೋಡಾವನ್ನು ಸಮಪ್ರಮಾಣದಲ್ಲಿ ಬೆರೆಸಿ ಎರಡು ಚಮಚ ನೀರು ಬೆರೆಸಿ ಪೇಸ್ಟ್ ತಯಾರಿಸಿ. ಹಾಲು, ಅನ್ನದ ಗಂಜಿ ಉಕ್ಕಿದ ಕಲೆಗಳನ್ನು ಇದು ಸುಲಭದಲ್ಲಿ ನಿವಾರಿಸುತ್ತದೆ. ವೈಟ್ ವಿನೆಗರ್ ಕೂಡಾ ಇದೇ ಪರಿಣಾಮ ಬೀರುತ್ತದೆ.