ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿಬಿಟ್ಟಿದೆ. ಅತಿಯಾದ ಮದ್ಯಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ.
ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. ಗ್ಯಾಸ್ಟ್ರಿಕ್ ತೊಂದರೆ ನಿವಾರಣೆ ಆಗುವವರೆಗೆ ಕೆಲ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಯಾಕಂದ್ರೆ ಅವುಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ.
ಕ್ಯಾಬೇಜ್ : ಇದು ಸುಲಭಕ್ಕೆ ಜೀರ್ಣವಾಗದ ತರಕಾರಿಗಳಲ್ಲೊಂದು. ಇದರಿಂದ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಾತ್ರಿ ಕ್ಯಾಬೇಜ್ ಸೇವಿಸುವುದರಿಂದ ಹೊಟ್ಟೆಯಲ್ಲಿ ಸೆಳೆತ ಹಾಗೂ ಗ್ಯಾಸ್ಟ್ರಿಕ್ ಉಲ್ಬಣಿಸುತ್ತದೆ.
ಆಲೂಗಡ್ಡೆ : ಆಲೂಗಡ್ಡೆ ಅಂದ್ರೆ ಎಲ್ಲರಿಗೂ ಇಷ್ಟವಾದ ತರಕಾರಿ. ಆದ್ರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಆಲೂಗಡ್ಡೆಯಿಂದ ದೂರವಿರುವುದು ಒಳ್ಳೆಯದು. ಆಲೂಗಡ್ಡೆಯಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ, ಅದು ಜೀರ್ಣಕ್ರಿಯೆಗೆ ಅಡ್ಡಿ ಮಾಡುತ್ತದೆ. ಅದರಲ್ಲೂ ಕಾಳುಗಳ ಜೊತೆ ಬೇಯಿಸಿದ ಆಲೂಗಡ್ಡೆ ತಿಂದಲ್ಲಿ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ.
ಕಲ್ಲಂಗಡಿ : ಇದರಲ್ಲಿ ನೀರು ಮತ್ತು ಖನಿಜದ ಪ್ರಮಾಣ ಹೆಚ್ಚಾಗಿರುತ್ತದೆ. ಈ ರಸಭರಿತ ಹಣ್ಣು ಕರುಳಿನಲ್ಲಿ ಕಳೆಯಬೇಕಾದ ಸಮಯವನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಲ್ಲಿ ಸಕ್ಕರೆ ಮನ್ನಿಟಾಲ್ ಇರುವುದರಿಂದ ಹೊಟ್ಟೆ ಉಬ್ಬರಿಸುತ್ತದೆ.
ಸೌತೆಕಾಯಿ : ಸೌತೆಕಾಯಿಯಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಇದನ್ನು ತಿನ್ನುವುದು ಹೊಟ್ಟೆಗೆ ಒಳ್ಳೆಯದಲ್ಲ. ಇದು ಜೀರ್ಣಕ್ರಿಯೆಯನ್ನು ನಿಧಾನ ಮಾಡಿ ಗ್ಯಾಸ್ ತುಂಬಿಕೊಳ್ಳಲು ಕಾರಣವಾಗುತ್ತದೆ. ರಾತ್ರಿ ಸೌತೆಕಾಯಿ ತಿಂದ ಬಳಿಕ ಹೊಟ್ಟೆ ಉಬ್ಬರಿಸಿದಂತಾಗಲು ಅದೇ ಕಾರಣ.
ಸ್ವೀಟ್ ಲೈಮ್ : ಈ ಹಣ್ಣು ಕೂಡ ನಿಮ್ಮ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದರೂ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ಸೇವಿಸದೇ ಇರುವುದು ಒಳಿತು. ಸ್ವೀಟ್ ಲೈಮ್ ಜ್ಯೂಸ್ ಕೂಡ ಕುಡಿಯಬೇಡಿ.