ಬೆಂಗಳೂರು: ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಾಲ್ವರು ಉಪಾಧ್ಯಕ್ಷರಿಗೆ ತಲಾ 26 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಾರ್ ಗಳ ಖರೀದಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಕಂಪನಿಯಿಂದ ನೇರವಾಗಿ ಐದು ವಾಹನಗಳ ಖರೀದಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪಾರದರ್ಶಕ ಕಾಯ್ದೆಯ ಅಡಿ ವಿನಾಯಿತಿ ನೀಡಿ ಆದೇಶಿಸಲಾಗಿದೆ. ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವ ನಾಲ್ಕು ಉಪಾಧ್ಯಕ್ಷರಿಗೆ ಹೊಸ ಕಾರ್ ಜೊತೆಗೆ ಕಚೇರಿ, ಅಧಿಕಾರಿ ವರ್ಗ, ಆಪ್ತ ಸಿಬ್ಬಂದಿಯನ್ನು ಮಂಜೂರು ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಬಹುಮಹಡಿ ಕಟ್ಟಡದಲ್ಲಿ ಕೊಠಡಿಗಳ ಹಂಚಿಕೆ ಮಾಡಲಾಗಿದೆ.
ಸಂಪುಟ ಸಚಿವರ ಸ್ಥಾನಮಾನ ಹೊಂದಿರುವ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರಿಗೆ ಈಗಾಗಲೇ ವಿಧಾನಸೌಧದಲ್ಲಿ ಕಚೇರಿ ನೀಡಲಾಗಿದೆ. ಉಪಾಧ್ಯಕ್ಷರಾಗಿರುವ ಸೂರಜ್ ಹೆಗಡೆ, ಪುಷ್ಪಾ ಅಮರನಾಥ್. ಮೆಹರೋಜ್ ಖಾನ್, ಎಸ್.ಆರ್. ಪಾಟೀಲ್ ಅವರಿಗೆ ಕ್ರಮವಾಗಿ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ವಿಭಾಗದ ಹೊಣೆ ನೀಡಲಾಗಿದೆ.