ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ ವಿಶೇಷ ರುಚಿಯನ್ನು ಸವಿಯಿರಿ.
ಬೇಕಾಗುವ ಪದಾರ್ಥಗಳು:
ಹಾಲು – ಅರ್ಧ ಲೀಟರ್, ಲೀಟರ್ ನ ಅರ್ಧ ಭಾಗದಷ್ಟು ಮೈದಾಹಿಟ್ಟು ಅಥವಾ ಗೋಧಿಹಿಟ್ಟು ಅಥವಾ ರವೆ, ಗೋಡಂಬಿ- 35 ಗ್ರಾಂ, ಸಕ್ಕರೆ -300 ಗ್ರಾಂ, ಏಲಕ್ಕಿ -8, ತುಪ್ಪ -100 ಗ್ರಾಂ, ಕೇಸರಿ ದಳ, ಪಚ್ಚ ಕರ್ಪೂರ –ಸ್ವಲ್ಪ.
ತಯಾರಿಸುವ ವಿಧಾನ:
ರವೆಯಾದಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿಕೊಂಡು, ಅರೆಯುವ ಕಲ್ಲು ಬಳಸಿ ತುಪ್ಪ ಸವರಿ ಚೆನ್ನಾಗಿ ಅರೆಯಿರಿ. ಮೈದಾ ಅಥವಾ ಗೋಧಿಹಿಟ್ಟಿನಲ್ಲಿ ಸ್ವಲ್ಪ ನೀರು ಹಾಕಿ ಕಲೆಸಿರಿ.
2 ಚಮಚ ತುಪ್ಪ ಹಾಕಿ ಮತ್ತೆ ಕಲೆಸಿಕೊಂಡು ಅರೆದ ರವೆ(ಇಲ್ಲವೇ ಕಲೆಸಿದ ಹಿಟ್ಟು) 2 ಅಥವಾ 3 ಉರುಳೆಗಳಾಗಿ ಉರುಟಿಸಿಕೊಳ್ಳಿ.
ಯಾವುದಾದರೂ ಹಿಟ್ಟಿನ ಮೇಲಾಡಿಸಿ ಹಪ್ಪಳದಂತೆ ಲಟ್ಟಿಸಿ ವಜ್ರದಾಕೃತಿಗೆ ಕತ್ತರಿಸಿಕೊಳ್ಳಿರಿ. ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿಕೊಂಡು, ಕಾದ ಬಳಿಕ, ಕತ್ತರಿಸಿದ ತುಂಡುಗಳನ್ನು ಹುರಿದುಕೊಳ್ಳಿ. ಗೋಡಂಬಿಯನ್ನು ಚೂರುಗಳಾಗಿ ಮಾಡಿ ಹುರಿದುಕೊಳ್ಳಿ.
ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಕುದಿಸಿ ಬಳಿಕ ಹುರಿದುಕೊಂಡ ತುಂಡುಗಳನ್ನು ಹಾಕಿ ಬೇಯಿಸಿ, ಸಕ್ಕರೆ ಹಾಕಿ, ಕರಗಿದ ಬಳಿಕ ಹಾಲು, ಏಲಕ್ಕಿ ಪುಡಿ, ಪಚ್ಚ ಕರ್ಪೂರ, ಕೇಸರಿ ದಳ ಸೇರಿಸಿ ಹುರಿದಿಟ್ಟುಕೊಂಡ ಗೋಡಂಬಿ ಹಾಕಿರಿ. ಪೂರಿ ಪಾಯಸ ರೆಡಿಯಾಗುತ್ತದೆ.